ಉಡುಪಿ, ಜು 13 (DaijiworldNews/SM): ಕೇಂದ್ರದ ನರೇಂದ ಮೋದಿ ಸರಕಾರದ 9 ವರ್ಷದಗಳ ಸಾಧನೆಯ ಕುರಿತಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿರುವ ಪ್ರಬುಧ್ದರ ಗೋಷ್ಠಿಯಲ್ಲಿ ಪ್ರಧಾನ ಭಾಷಣಮಾಡುವ ಸಲುವಾಗಿ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಉಡುಪಿ ಜಿಲ್ಲೆಗೆ ಆಗಮಿಸಿದ್ದಾರೆ.
ಜುಲೈ 14ರ ಬೆಳಿಗ್ಗೆ 11 ಗಂಟೆಗೆ ಮಣಿಪಾಲದ ಹೋಟೆಲ್ ಕಂಟ್ರಿ ಇನ್ ಸಭಾಂಗಣದಲ್ಲಿ ನಡೆಯಲಿರುವ ಪ್ರಬುದ್ಧರ ಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 9 ವರ್ಷಗಳ ಸಾಧನೆಗಳ ಕುರಿತು ಮಾಹಿತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಂಚಿಕೊಳ್ಳಲಿದ್ದಾರೆ. ಇವರನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉಡುಪಿಯ ಪ್ರವಾಸಿ ಬಂಗಲೆಯಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿದರು.
ನಾಳೆ ಬೆಳಿಗ್ಗೆ 7ಗಂಟೆಗೆ ನಿರ್ಮಲಾ ಸೀತಾರಾಮನ್ ರವರು ಉಡುಪಿ ಶ್ರೀ ಕೃಷ್ಣ ಮಠ ಮತ್ತು ಅದಮಾರು ಮಠಗಳಿಗೆ ಭೇಟಿ ನೀಡಿ 10 ಗಂಟೆಗೆ ಉಡುಪಿ ಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ಸ್ ಅಂಡ್ ಜ್ಯುವೆಲ್ಲರಿ ಸಂಸ್ಥೆಗೆ ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಎಮ್. ಸುವರ್ಣ, ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ಮಂಜುನಾಥ್ ಮಣಿಪಾಲ, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.