ಉಡುಪಿ, ಜು 12 (DaijiworldNews/MS): ಜು.14ರಂದು ಬೆಳಿಗ್ಗೆ 11.00 ಗಂಟೆಗೆ ಮಣಿಪಾಲದ ಹೋಟೆಲ್ ಕಂಟ್ರಿ ಇನ್ ಸಭಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 9 ವರ್ಷಗಳ ಸಾಧನೆ ಮತ್ತು ಪ್ರಬುದ್ಧರ ಗೋಷ್ಠಿಯನ್ನುದ್ದೇಶಿಸಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಮಾತನಾಡಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.
ಅವರು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಉಡುಪಿ ನಗರ ಮಂಡಲದ ಸಭೆಯಲ್ಲಿ ಭಾಗವಹಿಸಿ, 'ಮಹಾ ಸಂಪರ್ಕ ಅಭಿಯಾನ'ದ ಕರ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪಕ್ಷದ ಸೂಚನೆಯಂತೆ ಮಹಾ ಸಂಪರ್ಕ ಅಭಿಯಾನದಡಿ ಮಂಡಲ ವ್ಯಾಪ್ತಿಯ ಹಿರಿಯ ಬಿಜೆಪಿಗರ ಸಮಾವೇಶ, ವ್ಯಾಪಾರಿಗಳ ಸಮಾವೇಶ, ಮಂಡಲ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸುವ ಜೊತೆಗೆ ಪ್ರಧಾನಿ ಮೋದಿ ಆಡಳಿತದ 9 ವರ್ಷಗಳ ಸಾಧನೆಗಳನ್ನು ಪ್ರಚುರಪಡಿಸಲು ಮನೆ ಮನೆ ಬೇಟಿ, ಮಂಡಲ ವ್ಯಾಪ್ತಿಯಲ್ಲಿ 100 ಮಂದಿ ವೃತ್ತಿಪರರು ಮತ್ತು ಸಾಮಾಜಿಕ ಪ್ರಮುಖರ ತಂಡ ರಚನೆ, ಬೂತ್ ವಾರು 100 ಮಂದಿ ಸಕ್ರಿಯ ಕಾರ್ಯಕರ್ತರ ತಂಡ ರಚನೆ, ಮಂಡಲ ಪದಾಧಿಕಾರಿಗಳ ಸೌಹಾರ್ದ ಕೂಟ ಆಯೋಜನೆ ಹಾಗೂ ಸೋಷಿಯಲ್ ಮೀಡಿಯಾ ತಂಡವನ್ನು ಸಕ್ರಿಯಗೊಳಿಸುವುದು ಇತ್ಯಾದಿ ಪ್ರಮುಖ ಕಾರ್ಯ ಯೋಜನೆಗಳನ್ನು ಜುಲೈ ತಿಂಗಳಲ್ಲಿ ವ್ಯವಸ್ಥಿತವಾಗಿ ಹಮ್ಮಿಕೊಳ್ಳಬೇಕು ಎಂದರು.
ಬಿಜೆಪಿ ಕಾರ್ಯಕರ್ತ ಆಧಾರಿತ ರಾಜಕೀಯ ಪಕ್ಷ. ಕಾರ್ಯಕರ್ತರೇ ಪಕ್ಷದ ಜೀವಾಳ. ಯಾವುದೇ ವೈಪರೀತ್ಯಗಳ ನಡುವೆಯೂ ಪಕ್ಷ ನೀಡುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿಭಾಯಿಸುವ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯ ಪಕ್ಷದ ಕಾರ್ಯಕರ್ತರಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರತೀ ಬೂತ್ ಮಟ್ಟದಲ್ಲಿ ಸದೃಢ ಪಕ್ಷ ಸಂಘಟನೆಯ ಮೂಲಕ ಮುಂಬರಲಿರುವ ತಾ.ಪಂ., ಜಿ.ಪಂ. ಹಾಗೂ ಲೋಕಸಭಾ ಚುನಾವಣೆಯಲ್ಲಿ ಮಗದೊಮ್ಮೆ ಉಡುಪಿ ಜಿಲ್ಲೆ ನಿರಂತರ ಗೆಲುವಿನ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಸಂಘಟಿತರಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ನಿರಂತರ ಗೆಲುವಿನ ಛಾಪು ಮೂಡಿಸಿರುವ ಬಿಜೆಪಿ ಕಾರ್ಯಕರ್ತರು ರಾಜ್ಯಕ್ಕೇ ಮಾದರಿ. ಜಿಲ್ಲೆಯಲ್ಲಿ ಬಿಜೆಪಿ ವಿಜಯ ಯಾತ್ರೆಯನ್ನು ಮುಂದುವರಿಸಲು ಕೈಜೋಡಿಸಿರುವ ಎಲ್ಲರಿಗೂ ಅಭಿನಂದನೆಗಳು. ಕಾಂಗ್ರೆಸ್ ಕೇವಲ ಅಧಿಕಾರದ ದುರಾಸೆಯಿಂದ ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ ಉಚಿತಗಳ ಗ್ಯಾರಂಟಿಗಳಲ್ಲಿ ಯಾವುದನ್ನೂ ಯಥಾವತ್ತಾಗಿ ಜಾರಿಗೊಳಿಸದೆ ದಿನಕ್ಕೊಂದು ಷರತ್ತುಗಳನ್ನು ವಿಧಿಸುತ್ತಾ ಜನತೆಗೆ ಪಂಗನಾಮ ಹಾಕಿದೆ. ಸಿ.ಎಂ. ಸಿದ್ದರಾಮಯ್ಯ ಮಂಡಿಸಿದ ಈ ಬಾರಿಯ ಬಜೆಟ್ ನಲ್ಲಿ ಹಿಂದಿನ ಬಿಜೆಪಿ ಸರಕಾರದ ಜನಪರ ಯೋಜನೆಗಳನ್ನು ಕೈಬಿಟ್ಟಿರುವ ಜೊತೆಗೆ ಕರಾವಳಿ ಜಿಲ್ಲೆಗೆ ಯಾವುದೇ ಯೋಜನೆ ನೀಡದೇ ತಾರತಮ್ಯ ಎಸಗಿದ್ದಾರೆ. ರಾಜ್ಯದಲ್ಲಿ ಒಂದೇ ವರ್ಗದ ತುಷ್ಟೀಕರಣ ಮತ್ತು ಹಿಂದೂ ವಿರೋಧಿ ನೀತಿ ಮಿತಿ ಮೀರುತ್ತಿದೆ. ಪ್ರಧಾನಿ ಮೋದಿ ಆಡಳಿತ ವೈಖರಿ ದೇಶದೆಲ್ಲೆಡೆ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಭಾರತ ಇಂದು ಅತೀ ವೇಗದ ಆರ್ಥಿಕಾಭಿವೃದ್ಧಿಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಆಡಳಿತ ವೈಫಲ್ಯ ಹಾಗೂ ಕೇಂದ್ರ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಮುಂಬರಲಿರುವ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ದೊಡ್ಡ ಅಂತರದ ಗೆಲುವಿಗೆ ಬದ್ಧತೆಯಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಮಾತನಾಡಿ ಮಹಾ ಸಂಪರ್ಕ ಅಭಿಯಾನದಡಿ ಮನೆ ಮನೆ ಸಂಪರ್ಕ ಸಹಿತ ಪಕ್ಷ ನೀಡಿರುವ ಎಲ್ಲ ಚಟುವಟಿಕೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಜೊತೆಗೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಭರ್ಜರಿ ಗೆಲುವಿಗೆ ಸಂಘಟಿತರಾಗಿ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಶ್ರೀಶ ನಾಯಕ್ ಪೆರ್ಣಂಕಿಲ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಉಡುಪಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಭಟ್ ಕೊಡವೂರು, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಬಿಜೆಪಿ ಉಡುಪಿ ನಗರ ಉಪಾಧ್ಯಕ್ಷರಾದ ವಿಜಯ ಕೊಡವೂರು, ಕೃಷ್ಣಪ್ಪ ಜತ್ತನ್, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ, ದಿನೇಶ್ ಅಮೀನ್, ಉಡುಪಿ ನಗರಸಭೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಬಾಲಕೃಷ್ಣ ಶೆಟ್ಟಿ, ನಗರ ಮಂಡಲ ಕಾರ್ಯದರ್ಶಿಗಳಾದ ರಾಜೇಂದ್ರ ಪಂದುಬೆಟ್ಟು, ಆನಂದ್ ಸುವರ್ಣ, ಲಕ್ಷ್ಮೀ ಕಿನ್ನಿಮುಲ್ಕಿ, ಶ್ರೀಲತ, ಕೋಶಾಧಿಕಾರಿ ಸಂತೋಷ್ ಆಚಾರ್ಯ, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ನಗರಸಭಾ ಸದಸ್ಯರು, ನಗರ ಮಂಡಲ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಮಹಾಶಕ್ತಿ ಕೇಂದ್ರಗಳ ಸಂಚಾಲಕರಾದ ಕಿಶೋರ್ ಕುಮಾರ್ ಕರಂಬಳ್ಳಿ, ನಾಗರಾಜ್ ಶೇಟ್, ಸಂತೋಷ್ ಜತ್ತನ್, ನಗರ ಮಂಡಲ ಸಹಿತ ಮೋರ್ಚಾ, ಪ್ರಕೋಷ್ಠ ಹಾಗೂ ಶಕ್ತಿ ಕೇಂದ್ರಗಳ ಪ್ರಮುಖರು ಉಪಸ್ಥಿತರಿದ್ದರು.