ಮಂಗಳೂರು, ಜು 12 (DaijiworldNews/AK) ಸರಕಾರ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ನಿಗಮದ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರು ರಾಜ್ಯದ ನಿವಾಸಿಗಳಾಗಿರುವುದಕ್ಕೆ ಸಾಕ್ಷಿಯಾಗಿ ಗುರುತಿನ ಚೀಟಿ ಕಡ್ಡಾಯವಾಗಿ ತೋರಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಿಗೆ ಪತ್ರ, ವಾಸ್ಥಸ್ಥಳದ ಗುರುತಿನ ಚೀಟಿ ಅಥವಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಕಲ್ಯಾಣ ನಿರ್ದೇಶನಾಲಯದವರು ವಿತರಿಸಿರುವ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದು ದಾಖಲಾತಿಯನ್ನು ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರು ಗುರುತಿನ ಚೀಟಿಯ ಮೂಲ, ನಕಲು, ಡಿಜಿಲಾಕರ್ ಮಾದರಿಯಲ್ಲಿ ದಾಖಲೆಯನ್ನು ತೋರಿಸಲು ಸೂಚಿಸಲಾಗಿತ್ತು .
ಆದರೆ ಇತ್ತಿಚೇಗೆ ನಿಗಮದ ವಾಹನಗಳಲ್ಲಿ ಕೆಲವು ಮಹಿಳಾ ಪ್ರಯಾಣಿಕರು ಗುರುತಿನ ಚೀಟಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ತೋರಿಸದೆ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ ನಿರ್ವಾಹಕರ ಮತ್ತು ಪ್ರಯಾಣಿಕರ ಮಧ್ಯದಲ್ಲಿ ವಾಗ್ವಾದಗಳಾಗಿ ದೂರುಗಳು ಬರುತ್ತಿದೆ. ಈ ಹಿನ್ನಲೆ ಬಸ್ ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರು ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಪ್ರಯಾಣಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದೆ.