ಬೆಳ್ತಂಗಡಿ,ಏ 03(MSP): ‘ಮೇ 23ರ ಬಳಿಕ ನಮ್ಮ ಸಂಸಾರ- ಕರ್ನಾಟಕ ಸರ್ಕಾರ’ ಎಂಬ ನಾಟಕ ಕಂಪನಿ ನಿಂತು ಹೋಗಲಿದೆ’ ಅಂದು ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ನಮ್ಮ ಸಂಸಾರ- ಕರ್ನಾಟಕ ಸರ್ಕಾರ ಎಂಬ ನಾಟಕ ಕಂಪನಿ ಸೋತುಹೋಗುವ ಕೊನೆಕ್ಷಣದಲ್ಲಿ ಇದ್ದು, ಅದಕ್ಕೆ ಅಂತಿಮ ತೆರಬೀಳಲಿದೆ ಎಂದರು. ಪ್ರಧಾನಿ ಮೋದಿ ಮೇಲೆ ಅಲ್ಪಸಂಖ್ಯಾತರು ಕೂಡಾ ವಿಶ್ವಾಸ ಹೊಂದಿದ್ದು ಅವರು ಕೂಡಾ ನಮ್ಮನ್ನು ಬೆಂಬಲಿಸಲಿದ್ದಾರೆ ಎಂದರು.
ಕ್ಷೇತ್ರದಲ್ಲಿ ಪ್ರಥಮ ಹಂತದ ಚುನಾವಣಾ ಪ್ರಚಾರ ಕೊನೆಯ ಹಂತದಲ್ಲಿದ್ದು, ಇನ್ನೆರಡು ಹಂತಗಳಲ್ಲಿ ಪ್ರಚಾರ ನಡೆಸಲಿದ್ದೇವೆ. ಕರಾವಳಿಯಲ್ಲಿ ಈ ಬಾರಿಯೂ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಭೇರಿ ಬಾರಿಸಲಿದ್ದಾರೆ ಎಂದು ತಿಳಿಸಿದರು.
ಈ ಬಾರಿಯ ಲೋಕಸಭಾ ಚುನಾವಣೆಯು ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೌಟುಂಬಿಕ ರಾಜಕಾರಣ ಮತ್ತು ಪ್ರಜಾಪ್ರಭುತ್ವದ ನಡುವಿನ ಸಂಘರ್ಷವಾಗಿದೆ. ಏನೇ ಆದರೂ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.