ಕುಂದಾಪುರ, ಜು 12 (DaijiworldNews/MS): ರಾಹುಲ್ ಗಾಂಧಿಯವರ ತೇಜೊವಧೆಯ ವಿರುದ್ಧ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ನೇತೃತ್ವದಲ್ಲಿ ಜು.12ರಂದು ಕುಂದಾಪುರ ಶಾಸ್ತ್ರಿ ವೃತ್ತದ ಬಳಿಯಲ್ಲಿ ಮೌನ ಪ್ರತಿಭಟನೆ ನಡೆಯಿತು.
ರಾಷ್ಟ್ರವ್ಯಾಪ್ತಿ ಮೌನ ಪ್ರತಿಭಟನೆಗೆ ಪಕ್ಷ ಕರೆ ನೀಡಿರುವ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿ ಕೂಡಾ ಪ್ರತಿಭಟನಾನಿರತರು ಕುತ್ತಿಗೆಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ, ಕಾಂಗ್ರೆಸ್ ಮುಖಂಡರಾದ ದಿನೇಶ ಹೆಗ್ಡೆ, ಶಿವರಾಮ ಶೆಟ್ಟಿ ಮಲ್ಯಾಡಿ, ವಿಕಾಸ್ ಹೆಗ್ಡೆ, ಹಿರಿಯಣ್ಣ ಬಿ.,ಹಾರೂನ್ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಎಐಸಿಸಿ ಮಾಜಿ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿಯವರು ವಿವಿಧ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅದಾನಿ ನಡುವಿನ ಸಂಬಂಧವನ್ನು ನಿರಂತರವಾಗಿ ಬಹಿರಂಗಪಡಿಸುತ್ತಿದ್ದಾರೆ. ಈ ನಿರ್ಭಿತಿ ನಡೆಯನ್ನು ಸಹಿಸಿಕೊಳ್ಳದೆ ಪ್ರಧಾನಿ ನರೇಂದ್ರ ಮೋದಿ ಪದನಾಮ ಬಳಕೆಯನ್ನೇ ನೆಪವಾಗಿರಿಸಿಕೊಂಡು ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹತೆಗೊಳಿಸಿದ ಕೇಂದ್ರ ಸರಕಾರ ಹಾಗೂ ಬಿಜೆಪಿಯ ಸೇಡಿನ ಹುನ್ನಾರ ಖಂಡನಾರ್ಹವಾದುದು. ಆ ಹಿನ್ನೆಲೆಯಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಇಂದು ಮೌನ ಪ್ರತಿಭಟನೆ ನಡೆಸುತ್ತಿದೆ ಎಂದರು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮೊಳಹಳ್ಳಿ ದಿನೇಶ ಹೆಗ್ಡೆ ಮಾಧ್ಯಮದವರೊಂದಿಗೆ ಮಾತನಾಡಿ ರಾಹುಲ್ ಗಾಂಧಿಯವರನ್ನು ರಾಜಕೀಯ ಮುಗಿಸುವ ಹುನ್ನಾರದೊಂದಿಗೆ ಈ ಎಲ್ಲ ಕಾರ್ಯಗಳು ನಡೆಯುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿ, ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವುದು ಕಾಂಗ್ರೆಸ್ ಪಕ್ಷ. ಶಾಂತಿ, ಅಹಿಂಸೆ, ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕುಡಿ ರಾಹುಲ್ ಗಾಂಧಿಯವರ ರಾಜಕೀಯ ಜೀವನವನ್ನು ಮುಗಿಸಲು ಸಾಂವೀಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಏನೇ ಮಾಡಿದರೂ ಕೂಡಾ ರಾಹುಲ್ ಗಾಂಧಿಯವರು ದೇಶದ ಮುಂದಿನ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.