ಮಂಗಳೂರು, ಜು 12 (DaijiworldNews/AK): ನಗರದ ಹಿರಿಯ ವಕೀಲ ಬಿ.ಹರೀಶ್ ಆಚಾರ್ಯ ಅವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಮಂಗಳವಾರದಂದು ಬಿಜೈ ಬಾರಬೈಲ್ನಲ್ಲಿರುವ ಅವರ ಮನೆಯಲ್ಲಿ ಪತ್ತೆಯಾಗಿದೆ.
60 ವರ್ಷ ವಯಸ್ಸಿನ ಹರೀಶ್ ಆಚಾರ್ಯ ಒಂಟಿಯಾಗಿ ವಾಸಿಸುತ್ತಿದ್ದರು. ಕಳೆದ ಶುಕ್ರವಾರ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಆದರೆ ಸೋಮವಾರದಂದು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆ, ಅವರ ಕಿರಿಯ ಸಹೋದ್ಯೋಗಿಗಳು ಅವರಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಹಿನ್ನಲೆ ಮಂಗಳವಾರ ಕಿರಿಯ ವಕೀಲರು ಹರೀಶ್ ನಿವಾಸಕ್ಕೆ ಆಗಮಿಸಿದಾಗ ಅವರ ಮನೆಗೆ ಬೀಗ ಹಾಕಲಾಗಿತ್ತು. ನಂತರ ಪೊಲೀಸರು ಬಾಗಿಲು ತೆರೆದು ಒಳಪ್ರವೇಶಿಸಿ ನೋಡಿದಾಗ ಹರೀಶ್ ಆಚಾರ್ಯ ಶವ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಜುಲೈ 9 ರಂದು ಬೆಳಿಗ್ಗೆ 10 ಗಂಟೆ ಮತ್ತು ಜುಲೈ 11 ರಂದು ಬೆಳಿಗ್ಗೆ 11 ಗಂಟೆಯ ಮಧ್ಯಂತರ ಅವಧಿಯಲ್ಲಿ ಹರೀಶ್ ಹೃದಯಾಘಾತ ಅಥವಾ ಇತರ ಕಾರಣಗಳಿಂದ ಸಾವನ್ನಪ್ಪಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ಪಾರ್ಥಿವ ಶರೀರವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಶವಗಾರದಲ್ಲಿ ಇರಿಸಲಾಗಿದೆ. ಉರ್ವಾ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರ ಸಂಬಂಧಿಕರು ಉರ್ವಾ ಪೊಲೀಸ್ ರಾಣೆಯನ್ನು 0824-2220822/2220800ಗೆ ಸಂಪರ್ಕಿಸಲು ಕೋರಲಾಗಿದೆ.