ಕೋಟ, ಜು 12 (DaijiworldNews/MS): ಸಾಲಿಗ್ರಾಮದ ಕಾರ್ಕಡ ಬಡಾಹೋಳಿ ಎಂಬಲ್ಲಿ ಶಿಥಿಲಗೊಂಡ ಮನೆಯಲ್ಲಿ ವಾಸಿಸುತ್ತಿದ್ದ ಹಳೆಯಮ್ಮ ಪೂಜಾರ್ತಿ ಎನ್ನುವವರನ್ನು ಸ್ಥಳೀಯರು ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ಸೇರಿಸಿದರು.
ಮಾನಸಿಕ ಮತ್ತು ದೈಹಿಕವಾಗಿ ಬಳಲಿದ್ದ ಇವರು ಸರಿಯಾಗಿ ಊಟ ತಿಂಡಿ ಇಲ್ಲದೆ ಹಲವು ತಿಂಗಳಿನಿಂದ ಮನೆಯಲ್ಲಿಯೇ ಉಳಿದಿದ್ದರು. ಅಕ್ಕಾಪಕ್ಕದ ಮನೆಯವರು ಆಹಾರ ಪದಾರ್ಥಗಳನ್ನು ನೀಡಿದಲ್ಲಿ ಮಾತ್ರ ಸೇವಿಸುತ್ತಿದ್ದರು. ಇತ್ತೀಚಿನ ಮಳೆಯಿಂದ ಮನೆಯ ಎದುರಿನ ಮಾಡು ಶಿಥಿಲಗೊಂಡಿದ್ದು ಬೀಳುವ ಅಪಾಯದಲ್ಲಿತ್ತು. ಸ್ಥಳೀಯರು ಕೋಟ ಪಿಎಸ್ಐ ಶಂಭುಲಿಂಗ ಮತ್ತು ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಶ್ರೀಮತಿ ಇಂದು ಇವರಿಗೆ ರಕ್ಷಣೆಗಾಗಿ ಮನವಿ ನೀಡಿದ್ದರು.
ಮಂಗಳವಾರ ಮದ್ಯಾಹ್ನ ಪಟ್ಟಣಪಂಚಾಯತ್ ಮತ್ತು ಪೋಲೀಸರ ಉಪಸ್ಥಿತಿಯಲ್ಲಿ ಮನೆಯಲ್ಲಿರುವ ವಸ್ತುಗಳು, ಹಣ ಮತ್ತು ಅಡುಗೆ ಪಾತ್ರೆಗಳನ್ನು ಮಹಜರುಗೊಳಿಸಿದರು. ಸ್ಥಳೀಯ ಮಹಿಳೆಯರು ಸ್ನಾನ ಮಾಡಿಸಿ, ನಂತರ ಆಂಬುಲೆನ್ಸ್ ಮೂಲಕ ಕಾರ್ಕಳ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ಸೇರಿಸಲಾಯಿತು. ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಶ್ರೀಮತಿ ಇಂದು, ಮಮತ, ಮತ್ತು ಸಿಬ್ಬಂದಿಗಳು, ಕೋಟ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಮೋಹನ್ ಕೊತ್ವಾಲ್ ಸ್ಥಳೀಯರಾದ ರಮೇಶ್ ಮೆಂಡನ್, ಅಚ್ಯುತ್ ಪೂಜಾರಿ, ನಾಗರಾಜ್ ಗಾಣಿಗ, ಸುರೇಶ ಮೆಂಡನ್, ಚಂದ್ರಬಡಾಹೋಳಿ, ಶಂಕರದೇವಾಡಿಗ, ನರಸಿಂಹಮರಕಾಲ, ರಘು, ಆಶಾ ಕಾರ್ಯಕರ್ತೆ ಗೀತಾ, ಅಂಗನವಾಡಿ ಶಿಕ್ಷಕಿಯರಾದ ಸವಿತ ಮತ್ತು ಗಿರಿಜಾ ಇವರುಗಳು ಉಪಸ್ಥಿತರಿದ್ದು ಸಹಕರಿಸಿದರು.