ಮಂಗಳೂರು, ಜು 12 (DaijiworldNews/MS): ಜನಸಂಖ್ಯೆಯನ್ನು ನಿಯಂತ್ರಿಸಲು ಚೀನಾದಲ್ಲಿ ಕಡ್ಡಾಯ ನಿರ್ಬಂಧ ಹೇರಲಾಯಿತು. ಅದು ವ್ಯತಿರಿಕ್ತ ಪರಿಣಾಮ ಬೀರಿದ ಹಿನ್ನಲೆಯಲ್ಲಿ ಇದೀಗ ಅದನ್ನು ಹಿಂಪಡೆಯಲಾಗಿದೆ, ಜನಸಂಖ್ಯೆಯ ನಿಯಂತ್ರಣಕ್ಕೆ ಹಾಗೂ ಸುಖ ಸಂಸಾರಕ್ಕೆ ಕುಟುಂಬ ಕಲ್ಯಾಣ ಯೋಜನೆ ಉತ್ತಮ ಮಾರ್ಗವಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಕಚೇರಿ, ವಿ. ವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ,ಸ್ನಾತಕೋತ್ತರ ವಿಭಾಗಗಳ ವತಿಯಿಂದ ಜು.11ರ ಮಂಗಳವಾರ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಮಂಗಳೂರು ತಾಲೂಕು ಮಟ್ಟದ ಜನಸಂಖ್ಯೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲೂ ಕೂಡ 70-80ರ ದಶಕದಲ್ಲಿ ಜನಸಂಖ್ಯೆಯ ನಿಯಂತ್ರಣಕ್ಕೆ ಕೆಲವು ಕಡ್ಡಾಯ ಕ್ರಮಗಳನ್ನು ಜಾರಿಗೊಳಿಸಲು ಯತ್ನಿಸಲಾಯಿತು, ಅದರೆ ಅವುಗಳಿಂದಾಗುವ ದುಷ್ಪರಿಣಾಮಗಳ ಹಿನ್ನಲೆಯಲ್ಲಿ ಕೂಡಲೇ ಹಿಂಪಡೆಯಲಾಯಿತು, ಜನಸಂಖ್ಯೆಯ ನಿಯಂತ್ರಣ ಹಾಗೂ ನಮ್ಮ ಕುಟುಂಬ ಉತ್ತಮ ಪೋಷಣೆಗಾಗಿ ಕುಟುಂಬ ಕಲ್ಯಾಣ ಯೋಜನೆ ಅತ್ಯುತ್ತಮವಾಗಿದೆ, ಈ ಮೂಲಕ ಸಂತೋಷ ಹಾಗೂ ಸಮೃದ್ದಿಯ ಜೀವನ ಆಯ್ಕೆ ಮಾಡಿಕೊಳ್ಳುವ ಹಕ್ಕು ನಮ್ಮದ್ದಾಗಿದೆ, ಈ ಯೋಜನೆಯ ಉಪಯೋಗ ಮತ್ತು ಜನಸಂಖ್ಯಾ ಸ್ಪೋಟದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಪರಿಸರದಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಹಾಗೂ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಅನುಸೂಯ ಮಾತನಾಡಿದರು.
ಐಎಎಸ್ ಪ್ರೋಬೇಷನರಿ ಅಧಿಕಾರಿ ಮುಕುಲ್ ಜೈನ್, ವಿ.ವಿ ಕಾಲೇಜಿನ ಎನ್ಎಸ್ಎಸ್ ಅಧಿಕಾರಿಗಳಾಧ ಡಾ. ಗಾಯತ್ರಿ ಹಾಗೂ ಡಾ.ಸುರೇಶ್, ವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಯವಂತ್ ನಾಯಕ್, ವಿಶ್ವವಿದ್ಯಾನಿಲಯ ಕಾಲೇಜಿನ ಎನ್ಸಿಸಿ ವಿಭಾಗದ ಅಧಿಕಾರಿ ಡಾ.ಜಯರಾಜ್, ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಅಬ್ಬುಬಕ್ಕರ್ ಸಿದ್ಧಿಕ್, ವಿಶ್ವವಿದ್ಯಾನಿಲಯ ಕಾಲೇಜ್ ಎನ್ಸಿಸಿ ವಿಭಾಗದ ಲೆಫ್ಟಿನೆಂಟ್ ಕಮಾಂಡರ್ ಡಾ. ಯತೀಶ್ ವೇದಿಕೆಯಲ್ಲಿದ್ದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪ ಪ್ರಭು ಸ್ವಾಗತಿಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್ ಕುಮಾರ್ ವಂದಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಉಳೆಪಾಡಿ ನಿರೂಪಿಸಿದರು.