ಸುಳ್ಯ, ಎ03(SS): ನಳಿನ್ ಕುಮಾರ್ ಕಟೀಲ್ ಓರ್ವ ಸಜ್ಜನ ರಾಜಕಾರಣಿಯಾಗಿದ್ದು, ಅವರು ಕಳಂಕವಿಲ್ಲದೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು 2 ಲಕ್ಷ ಮತಗಳ ಅಂತರದಿಂದ ವಿಜಯಿಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸುವುದು ನಿಶ್ಚಿತ. ಸಂಸದನಾಗಿರುವ ನಳಿನ್ ಭ್ರಷ್ಟಾಚಾರ ರಹಿತವಾಗಿ, ಅಧಿಕಾರ ದುರುಪಯೋಗಪಡಿಸದೆ, ಜನಪರ ನಿಲುವಿನೊಂದಿಗೆ ಅಧಿಕಾರ ನಡೆಸಿದ್ದಾರೆ. ಅವರಿಗೆ ಜಿಲ್ಲೆಯ ಜನರು ಅಭೂತಪೂರ್ವ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಎತ್ತಿನಹೊಳೆ ಸಮಸ್ಯೆ ಬಂದಾಗ ಪಾದಯಾತ್ರೆ, ಕಂಬಳ ನಿಷೇಧದ ಅಭಿಪ್ರಾಯ ಬಂದಾಗ ಹೋರಾಟ, ಹಿಂದುಗಳ ಹತ್ಯೆಯಾದಾಗ ಪರಿವರ್ತನ ಯಾತ್ರೆ, ದೇಯಿ ಬೈದೇತಿಗೆ ಅವಮಾನವಾದಾಗ ಹೋರಾಟ ನಡೆಸಿದ್ದಾರೆ. ನಳಿನ್ ಸಜ್ಜನ ರಾಜಕಾರಣಿಯಾಗಿದ್ದು, ಕಳಂಕವಿಲ್ಲದೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ವಿರೋಧ ಪಕ್ಷಗಳಿಗೆ ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ ಅನ್ನುವುದು ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನ ಶಕ್ತಿ ಕುಂದಿದೆ ಎನ್ನುವುದು ಆ ಪಕ್ಷಗಳ ಚುನಾವಣಾ ಪೂರ್ವ ಮೈತ್ರಿಯಲ್ಲಿ ಸಾಬೀತಾಗಿದೆ. ಆದರೆ ಅವರ ಮೈತ್ರಿ ಹೋರಾಟ ಬಿಜೆಪಿ ಮೇಲೆ ಪರಿಣಾಮವಾಗುವುದಿಲ್ಲ. ಪಕ್ಷವು ಇನ್ನಷ್ಟು ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಬಿಗಾಡಾಯಿಸಿದ್ದರೂ, ಸಚಿವ ಯು.ಟಿ. ಖಾದರ್ ಸ್ಪಂದಿಸುತ್ತಿಲ್ಲ. ರಾಜ್ಯ ಸರಕಾರ ಪ್ರಾಕೃತಿಕ ವಿಕೋಪದಡಿ ರಸ್ತೆ ಹೊಂಡ, ಗುಂಡಿ ಮುಚ್ಚಲು ಅನುದಾನ ನೀಡಿಲ್ಲ. ಮೈತ್ರಿ ಸರಕಾರ ಅಭಿವೃದ್ಧಿಗೆ ಗಮನ ಕೊಡದೆ ಅಧಿಕಾರ ಉಳಿಸಲು ಮಾತ್ರ ಪ್ರಾಮುಖ್ಯ ನೀಡುತ್ತಿದೆ ಎಂದು ಕಿಡಿ ಕಾರಿದರು.
ಸಮೀಕ್ಷೆಗಳಲ್ಲಿ ನಂ. 1 ಸಂಸದ, ಆದರ್ಶ ಗ್ರಾಮ ಅನುಷ್ಠಾನದಲ್ಲಿ ಸ್ಥಾನ ದೊರೆತಿರುವುದು ನಳಿನ್ ಸಾಧನೆಗೆ ಉದಾಹರಣೆ. ಐದು ವರ್ಷಗಳಲ್ಲಿ 16,500 ಕೋ.ರೂ. ಅನುದಾನ ತಂದಿದ್ದಾರೆ. ಕಾಂಗ್ರೆಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದರು.