ಉಡುಪಿ, ಜು 11 (DaijiworldNews/HR): ಭಾರತೀಯ ಜನತಾ ಪಕ್ಷದ ವತಿಯಿಂದ ಜೈನ ಗುರು ಮತ್ತು ಟಿ.ನರಸಿಪುರದ ಹಿಂದು ಕಾರ್ಯಕರ್ತ ವೇಣುಗೋಪಾಲ್ ರ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಯು ಉಡುಪಿ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ನಡೆಯಿತು.
ಉಡುಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, "ರಾಜ್ಯದಲ್ಲಿ ಜನರ ನಿರೀಕ್ಷೆಯಿಂದ ಕಾಂಗ್ರೆಸ್ ಸರಕಾರ ಬಂದಿದೆ. ಸರಕಾರ ಬಂದ ನಂತರ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ನೋಡಿದರೆ,2013-18ರಲ್ಲಿ ಹೇಗೆ ಸಿದ್ದರಾಮಯ್ಯ ಸರಕಾರ ಇತ್ತೋ, ಅದೇ ತರ ಹಿಂದುಗಳ ಪಾಲಿಗೆ ಇದೊಂದು ಭೀಕರ ಅವಧಿ" ಎಂದರು.
"ಕರ್ನಾಟಕದಲ್ಲಿ ನಡೆದ ಎರಡು ಕೊಲೆಗಳನ್ನು ನಾವು ಖಂಡಿಸುತ್ತೇವೆ. ಇಂತಹ ಕೊಲೆಯಾದರೆ, ಭಾರತೀಯ ಜನತಾ ಪಕ್ಷ ಮತ್ತು ಹಿಂದು ಸಂಘಟನೆಗಳು ಬೀದಿಗೆ ಬರುವ ಕಾಲ ದೂರ ಇಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ಕೊಡುತ್ತಾ,ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಎರಡು ಕೊಲೆಗಳಿಗೆ ನ್ಯಾಯ ಒದಗಿಸಿ ಕೊಡಬೇಕೆಂದು" ಹೇಳಿದರು.
ಬಿಜೆಪಿ ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಮಾತನಾಡಿ, "ಕೊಲೆಗಟುಕ ಸರಕಾರ ನಮ್ಮನ್ನು ಆಳುತ್ತಿದೆ ಎಂದು ಭಾಸವಾಗುತ್ತಿದೆ.ಇಷ್ಟು ಬೇಗ ಕಾಂಗ್ರೆಸ್ ಈ ಸ್ಥಿತಿಗೆ ಬರುತ್ತದೆ ಎಂಬ ನೀರಿಕ್ಷೆ ನಮಗಿರಲಿಲ್ಲ.ಜೈನ ಮುನಿಯ ಹತ್ಯೆಯಯಲ್ಲಿ ಅವರ ಅನುಯಾಯಿಗಳು ಇದ್ದ,ಮತ್ತೊಬ್ಬ ಅಲ್ಪಸಂಖ್ಯಾತ ಅಪರಾಧಿ ಕೂಡ ಇದ್ದ.ಅವರದ್ದೇ ಸರಕಾರ ಇದೆ,ಪೋಲೀಸ್ ನವರು ಯಾರೆಲ್ಲ ಅಪರಾಧಿಗಳು ಭಾಗಿಯಾಗಿದ್ದರು ಎಂದು ಹೇಳಿದರು. ಆದರೆ, ಆ ಅಲ್ಪಸಂಖ್ಯಾತ ಆಪರಾಧಿಯ ಹೆಸರನ್ನು ಉಲ್ಲೇಖ ಮಾಡುವುದಿಲ್ಲ. ಇದರ ಅರ್ಥವೇನು? ಜೈನರು ದೇವರು ಬೇರೆಯಲ್ಲ, ಜೈನಮುನಿಗಳು ಬೇರೆಯಲ್ಲಾ ಎಂದು ಬದುಕುತ್ತಾರೆ.ಅಂತಹ ಜೈನಮುನಿಗಳನ್ನು ತುಂಡು-ತುಂಡು ಮಾಡಿ,ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿದವರ ಬಗ್ಗೆಯಾಗಲೀ, ಅಪರಾಧಿಯ ಹೆಸರನ್ನು ಹೇಳುವುದಿಲ್ಲ ಎಂದಾದರೆ,ಯಾವ ರೀತಿ ನಮ್ಮ ರಾಜ್ಯಕ್ಕೆ ದ್ರೋಹವನ್ನು ಮಾಡುತ್ತಿದ್ದಾರೆ ಎಂದು ಯೋಚಿಸಬೇಕು” ಎಂದರು.
"ಟಿ.ನರಸೀಪುರದ ಕಾರ್ಯಕರ್ತ ವೇಣುಗೋಪಾಲ್ ನ ಹತ್ಯೆಯ ತನಿಖೆ ಕೂಡ ಹಳ್ಳ ಹಿಡಿಯುವುದರ ಬಗ್ಗೆ ಯಾವುದೇ ಸಂಶಯ ಇಲ್ಲ.ಜೈನಮುನಿಗಳ ಬಗ್ಗೆ ಈ ರೀತಿ ವರ್ತಿಸಿದವರು,ಒಬ್ಬ ಹಿಂದು ಯುವ ಬ್ರಿಗೇಡ್ ನ ಹತ್ಯೆಯೆಯ ಬಗ್ಗೆ ಯಾವ ರೀತಿ ನಡೆದುಕೊಳ್ಳಬಹುದು ಎಂದರು.ಇದನ್ನು ಜನತಾ ಪಕ್ಷ ಖಂಡಸುತ್ತೇವೆ" ಎಂದರು.
ಈ ವೇಳೆ ಮಾಜಿ ಸಚಿವ ರಘುಪತಿ ಭಟ್, ಬಿಜೆಪಿ ವಕ್ತಾರ ರಾಘವೇಂದ್ರ ಕಿಣಿ ಮತ್ತಿತರು ಉಪಸ್ಥಿತರಿದ್ದರು.