ಮಂಗಳೂರು: ಹೊಂಡಗಳಿಂದ ಕೂಡಿದ ರಾಷ್ಟ್ರೀಯ ಹೆದ್ದಾರಿ - ಭಯದಲ್ಲೇ ಸಂಚರಿಸುತ್ತಿರುವ ವಾಹನ ಸವಾರರು
Tue, Jul 11 2023 01:41:52 PM
ಮಂಗಳೂರು, ಜು 11 (DaijiworldNews/HR): ರಾಷ್ಟ್ರೀಯ ಹೆದ್ದಾರಿ ಹಳ್ಳ-ಕೊಳ್ಳಗಳಿಂದ ತುಂಬಿ ತುಳುಕುತ್ತಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರು ಆತಂಕದಲ್ಲೇ ಪ್ರಯಾಣಿಸುತ್ತಿದ್ದಾರೆ. ಮಳೆಗಾಲ ಬಂದಾಗಲಂತೂ ರಸ್ತೆ ಯಾವುದು? ಗುಂಡಿ ಯಾವುದು ಎಂಬುದನ್ನು ಅರಿಯಲೂ ಸಾಧ್ಯವಾಗದೆ ಹೊಂಡಗಳಿಗೆ ವಾಹನಗಳಿಲಿದು ನರಕಯಾತನೆ ಪಡಲೇಬೇಕು.
ಮಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಗರದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ ಬಿಕರ್ನಕಟ್ಟೆ ಬಳಿ ಗುಂಡಿ ತಪ್ಪಿಸಲು ಹೋಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತಿಶ್ ಮೃತಪಟ್ಟಿದ್ದು, ಆತನ ಸಾವಿನ ವಿರುದ್ಧ ಅನೇಕ ಪ್ರತಿಭಟನೆಗಳು ನಡೆದವು. ಆದರೆ ಈ ಬಾರಿ ಮತ್ತೆ ರಸ್ತೆ ಗುಂಡಿಗಳು ಕಾಣುತ್ತಿದೆ.
ಈ ಕುರಿತು ದಾಯ್ಜಿವಲ್ಡ್ ಜೊತೆ ಮಾತನಾಡಿದ ಲಿಖಿತ್, ಆಗಸ್ಟ್ 2022 ರಲ್ಲಿ ಬಿಕರ್ನಕಟ್ಟೆಯಲ್ಲಿ ಗುಂಡಿ ತಪ್ಪಿಸಲು ಪ್ರಯತ್ನಿಸಿ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವನ್ನಪ್ಪಿದ್ದು, ಇಲ್ಲಿಯವರೆಗೆ ಆತನ ಸಾವಿಗೆ ನ್ಯಾಯ ಸಿಕ್ಕಿಲ್ಲ. ಜೊತೆಗೆ ಈ ಬಾರೀಯ ಮಳೆಗೂ ಅದೇ ರೀತಿಯ ಗುಂಡಿಗಳು ಕಾಣುತ್ತಿದೆ. ಬಿ.ಸಿ.ರೋಡ್ನಿಂದ ಸುರತ್ಕಲ್ಗೆ ಪ್ರಯಾಣಿಸಿದರೆ 100 ಮೀಟರ್ಗೊಂದು ಗುಂಡಿಗಳು ಕಾಣಸಿಗುತ್ತವೆ. ಕೆಲವು ದಿನಗಳ ಹಿಂದೆ ಬಿಕರ್ನಕಟ್ಟೆಯಲ್ಲಿ ಕೆಲವು ಯುವಕರು ಗುಂಡಿಗಳನ್ನು ಮುಚ್ಚಿದ್ದು ನಾವು ಅವರಿಗೆ ಧನ್ಯವಾದ ಹೇಳಬೇಕಾಗಿದೆ ಎಂದರು.
ಇನ್ನು ಮಂಗಳೂರಿನಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು, ಧಾರ್ಮಿಕ ಕ್ಷೇತ್ರಗಳು, ಬೀಚ್ ಪ್ರವಾಸೋದ್ಯಮ ಇಲ್ಲಿನ ಅಂದ ಚಂದವನ್ನು ಜಗತ್ತಿನಾದ್ಯಂತ ಪಸರಿಸಿದೆ. ಮಂಗಳೂರನ್ನು ಮತ್ತಷ್ಟು ಸುಂದರಗೊಳಿಸಲು ಸ್ಮಾರ್ಟ್ ಸಿಟಿ ಯೋಜನೆ. ಆ ಸ್ಮಾರ್ಟ್ ಸಿಟಿ ನಿರ್ವಹಣೆಗಾಗಿ ಸರಕಾರ ಕೋಟಿ ಕೋಟಿ ಹಣವನ್ನು ವ್ಯಯಿಸುತ್ತಿದೆ. ಆದರೆ, ಸುಂದರಗೊಂಡಿರುವ ಮಂಗಳೂರು ನಗರವನ್ನು ಸುತ್ತಾಡಬೇಕಿದ್ದರೆ ನಾವು ಹೊಂಡ ಗುಂಡಿಯ ಮಧ್ಯೆ ಸಾಗಲೇಬೇಕು.
ನಂತೂರು,ಪಡೀಲ್, ಕೆಪಿಟಿ, ಕೂಳೂರು, ಪಣಂಬೂರು, ತೊಕ್ಕೋಟು ಈಭಾಗದಲ್ಲಿ ವರ್ಷಂಪ್ರತಿ ಮಳೆಗಾಲ ಆರಂಭವಾಗುತ್ತಲೆ ರಸ್ತೆಗಳ ಮಧ್ಯೆ ಹೊಂಡಗಳು ಬಾಯ್ತೆರೆಲಾಂಬಿಸುತ್ತೆ. ಇದರಿಂದಾಗಿ ಅದೆಷ್ಟೋ ಮಂದಿ ತಮ್ಮ ಜೀವನ ಕಳೆದುಕೊಂಡದ್ದು ಇದೇ. ಹೌದು ಕಳೆದ ಬಾರಿ ನಗರದ ನಂತೂರಿನ ರಸ್ತೆಯಲ್ಲಿದ್ದ ಹೊಂಡಕ್ಕೆ ಬಿದ್ದು ದೇರೆಬೈಲ್ ನಿವಾಸಿ ಅತೀಶ್ ಮೃತಪಟ್ಟರೆ, ತೊಕ್ಕೋಟು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕಾಲೇಜು ವಿದ್ಯಾರ್ಥಿನಿ ಹೊಂಡಕ್ಕೆ ಬಿದ್ದು ಪರೀಕ್ಷೆ ನೀಡದೆ ಮನೆಯಲ್ಲೆ ಉಳಿಯುವಂತಾಯಿತು. ಬೆಳ್ತಂಗಡಿ ನಿವಾಸಿಯೊಬ್ಬರು ಬಸ್ ನಲ್ಲಿ ಪ್ರಯಾಣಿಸುವ ವೇಳೆ ಬಸ್ ಚಕ್ರ ಹೊಂಡಕ್ಕೆ ಬಿದ್ದು ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆದಿದ್ದಾರೆ. ಹೀಗೆ ಹತ್ತು ಹಲವು ಘಟನೆಗಳು ನಡೆದರೂ ಬೇಜವಬ್ದಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಕಣ್ಣಿದ್ದೂ ಕುರುಡರಾಗಿದ್ದಾರೆ.