ಬೈಂದೂರು, ಜು 10 (DaijiworldNews/SM): ಶಿರೂರು ಹೆದ್ದಾರಿಯ ನಡುವಿನ ಒತ್ತಿನಣೆಯಲ್ಲಿ ಮತ್ತೆ ಗುಡ್ಡಕುಸಿತ ಆರಂಭವಾಗಿದೆ. ಕಳೆದ ಮೂರುನಾಲ್ಕು ದಿನಗಳಿಂದ ಗುಡ್ಡ ಅಲ್ಲಲ್ಲಿ ಕುಸಿಯುತ್ತಿದ್ದು ರವಿವಾರವೂ ಕೂಡಾ ಗುಡ್ಡ ಕುಸಿತವಾಗಿದೆ. ರವಿವಾರ ರಾತ್ರಿ ಮತ್ತೆ ಕುಸಿತವಾಗಿದ್ದು ಸೋಮವಾರ ಬೆಳಿಗ್ಗೆ ರಸ್ತೆಗೆ ಜಾರಿರುವ ಮಣ್ಣನ್ನು ತೆರವುಗೊಳಿಸಲಾಯಿತು.
ಈ ಭಾಗದಲ್ಲಿ ಮತ್ತೆ ಕೂಡಾ ಗುಡ್ಡ ಕುಸಿಯುವ ಸಾಧ್ಯತೆಗಳಿವೆ. ಮೇಲ್ವಾಗ ಮತ್ತಷ್ಟು ಕುಸಿಯುವ ಸಾಧ್ಯತೆಗಳು ದಟ್ಟವಾಗಿದೆ. ಅರಣ್ಯ ಇಲಾಖೆಯ ವ್ಯಾಪ್ತಿಯ ಸ್ಥಳವಾಗಿರುವುದರಿಂದ ಕುಸಿಯಲ್ಪಡುವ ಪ್ರದೇಶವನ್ನು ತೆರವು ಮಾಡಲು ಸಮಸ್ಯೆಯಾಗುತ್ತದೆ. ಹಾಗಾಗಿ ಕೆಳಭಾಗದಲ್ಲಿ ಕಾಂಕ್ರೆಟಿನ ಬಂಡ್ಗಳನ್ನು ಇಟ್ಟು ಕುಸಿದ ಮಣ್ಣು ರಸ್ತೆಗೆ ಅಪ್ಪಳಿಸದಂತೆ ಸುರಕ್ಷಿತ ಕ್ರಮಗಳ ಕೈಗೊಳ್ಳಲಾಗುತ್ತಿದೆ. ಆದರೂ ಕೂಡ ಮೇಲ್ಭಾಗದ ಅಪಾಯದ ಮುನ್ಸೂಚನೆ ನೀಡುತ್ತಿದ್ದು ಅಪಾಯ ಕಟ್ಟಿಟ್ಟ ಬುತ್ತಿ.
ಒತ್ತಿನಣೆಯ ಗುಡ್ಡದಲ್ಲಿ ಸಂಪೂರ್ಣ ಮಣ್ಣು ತಗೆದು ನಡುವೆ ರಸ್ತೆ ನಿರ್ಮಿಸಿದ ಪರಿಣಾಮ ಇವತ್ತಿಗೂ ಮಳೆಗಾಲದಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ಸಮಸ್ಯೆಯಾಗುವುದನ್ನು ತಡೆಗಟ್ಟಲು ಆಗಿಲ್ಲ. ಅವೈಜ್ಞಾನಿಕವಾಗಿ ಮಣ್ಣು ತಗೆದಿರುವುದರಿಂದ ಜೇಡಿ ಮಣ್ಣು ಮಳೆಗೆ ಕುಸಿಯುತ್ತಿದೆ. ತೀವ್ರ ಕುಸಿಯುವ ಪ್ರದೇಶಕ್ಕೆ ಕಾಂಕ್ರಿಟ್ ಹೊದಿಕೆ ಮಾಡಿದರೂ ಕೂಡಾ ಅದು ಒಡೆದು ಹೋಗಿದೆ. ಈ ಕಾಂಕ್ರಿಟ್ ಪದರಗಳು ಸಂಪೂರ್ಣವಾಗಿ ಜಖುಂಗೊಂಡಿದ್ದು ಮತ್ತೆ ಮಳೆ ಜೋರಾದರೆ ಜೇಡಿಮಣ್ಣು ನೀರಿನೊಂದಿಗೆ ರಸ್ತೆಗೆ ಅಪ್ಪಳಿಸಲಿದೆ. ಇದು ವರ್ಷದ ಎಂಟು ತಿಂಗಳು ನೀರು ಒಸರುವ ಸ್ಥಳವಾದ್ದರಿಂದ ಮಣ್ಣು ಕುಸಿತ ನಿಯಂತ್ರಿಸುವುದು ಕೂಡಾ ಕಷ್ಟಸಾಧ್ಯ.
ಈಗಾಗಲೇ ಅಲ್ಲಲ್ಲಿ ಕಾಂಕ್ರಿಟ್ ತಡೆಯನ್ನು ಒಡೆದು ಮಣ್ಣು ಕುಸಿಯುತ್ತಿದ್ದು, ಮರಳು ಚೀಲಗಳನ್ನು ಅಡ್ಡ ಇಡಲಾಗಿದೆ. ಆದರೆ ಇದರಿಂದ ನಿಯಂತ್ರಣ ಕಷ್ಟಸಾಧ್ಯ. ಮಳೆಯ ತೀವ್ರತೆ ಹೆಚ್ಚಾದರೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿಯುವ ಸಾಧ್ಯತೆಗಳು ಇವೆ.