ಮಂಗಳೂರು, ಜು 10 (DaijiworldNews/MS): ಚಿಕ್ಕೋಡಿಯ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಅವರ ಹತ್ಯೆ ಖಂಡಿಸಿ ಹಾಗೂ ಆರೋಪಿಗಳು ಕಾನೂನಿನಡಿ ನುಣಿಚಿಕೊಳ್ಳದಂತೆ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಲು ಆದೇಶಿಸುವಂತೆ ಒತ್ತಾಯಿಸಿ ನಗರದಲ್ಲಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ಮತ್ತು ಜೈನ ಸಮಾಜದ ನೇತೃತ್ವದಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮೂಡುಬಿದಿರೆಯ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಕ್ಲಾಕ್ ಟವರ್ನಿಂದ ಜಿಲ್ಲಾಧಿಕಾರಿ ಕಚೇರಿವರಿಗೆ ನಡೆದ ಮೆರವಣಿಗೆಯಲ್ಲಿ ಜೈನ ಸಮುದಾಯದ ಪ್ರಮುಖರಾದ ಪುಷ್ಪರಾಜ್ ಜೈನ್, ಸುರೇಶ್ ಬಲ್ಲಾಳ್, ಸುದರ್ಶನ ಜೈನ್, ರತ್ನಾಕರ ಜೈನ್, ಜಗತ್ಪಾಲ್ ಜೈನ್ ಮೊದಲಾದವರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
200 ವರ್ಷದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿಲ್ಲ. ಅಲ್ಪಸಂಖ್ಯಾಕರಾದ ಜೈನ ಧರ್ಮೀಯರಿಗೆ ಸಾಮಾಜಿಕ ಭದ್ರತೆಯ ಭಯ ಉಂಟಾಗಿದ್ದು ಎಲ್ಲ ಮುನಿಗಳು, ಸಂತರಿಗೆ ಸೂಕ್ತ ರಕ್ಷಣೆ ಕೊಡಬೇಕು. ಘಟನೆ ಕುರಿತು ಸೂಕ್ತ ತನಿಖಾಧಿಕಾರಿಯನ್ನು ನೇಮಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಇದೇ ಸಂದರ್ಭ ಒತ್ತಾಯಿಸಲಾಯಿತು.