ಸುಳ್ಯ, ಎ03(SS): ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣಾ ಪ್ರಚಾರದ ಕಾರ್ಯಕ್ರಮ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ವಿಶೇಷ ಪ್ರಸಂಗ ನಡೆದಿದೆ.
ಯುವ ನಾಯಕ ಮಿಥುನ್ ರೈ ಭಾಷಣ ನಿಲ್ಲಿಸಲು ಕಾರಣವಾಗಿದ್ದು ಆಜಾನ್ (ನಮಾಜ್). ಎ.02ರಂದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಸಮೀಪದ ಮಸೀದಿಯಿಂದ ಆಜಾನ್ (ನಮಾಜ್) ಧ್ವನಿ ಕೇಳಿತು. ತಕ್ಷಣವೇ ಮಿಥುನ್ ರೈ ಕೆಲ ಕ್ಷಣಗಳ ಕಾಲ ತಮ್ಮ ಭಾಷಣವನ್ನು ನಿಲ್ಲಿಸಿ ಮೌನವಾದರು. ನಂತರ ಆಜಾನ್ ಮುಗಿದ ಬಳಿಕ ಮತ್ತೆ ಭಾಷಣ ಮುಂದುವರೆಸಿದರು.
ಮಿಥುನ್ ರೈ ಅವರು ತಮ್ಮ ಭಾಷಣವನ್ನು ನಿಲ್ಲಿಸುತ್ತಿದ್ದಂತೆ ಸಭಿಕರಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು. ಸಚಿವ ಯು.ಟಿ ಖಾದರ್ ಕೂಡ ಸನ್ನೆಯ ಮೂಲಕ ಮಿಥುನ್ ರೈ ಅವರಲ್ಲಿ ಏನು ಎಂದು ಕೇಳಿದರು. ಆಗ ಮಿಥುನ್ ರೈ ಆಜಾನ್ ಆಗುತ್ತಿರುವುದಾಗಿ ಹೇಳಿದರು.
ಮಿಥುನ್ ರೈ ಆಜಾನ್ ಮುಗಿದ ಬಳಿಕ ಯಾದಾ ಯಾದಹೀ ಧರ್ಮಸ್ಯ ಅಂತಾ ಹೇಳಿ ಭಾಷಣ ಆರಂಭಿಸುತ್ತಿದಂತೆ ಎಲ್ಲ ಸಭಿಕರು ಚಪ್ಪಾಳೆ ತಟ್ಟುವ ಮೂಲಕ ಮಿಥುನ್ ರೈ ನಡೆಯನ್ನು ಸ್ವಾಗತಿಸಿದರು.
ಯುವ ನಾಯಕನ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.