ಮಂಗಳೂರು, ಜು 09 (DaijiworldNews/SM): ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಬಗ್ಗೆ ಇರುವ ಸಾಧಕ-ಭಾದಕಗಳ ಬಗ್ಗೆ ಮಂಗಳೂರು ಧರ್ಮಕೇಂದ್ರದ ಕ್ರೈಸ್ತ ಮುಖಂಡರು ಸಭೆ ಸೇರಿ ಚರ್ಚಿಸಿದರು. ಕರ್ನಾಟಕದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶಜಾನ್ ಮೈಕಲ್ ಡಿಕುನ್ಹಾರವರು ಸವಿಸ್ತಾರವಾಗಿ ವಿಷಯವನ್ನು ಸಭೆಗೆ ಮಂಡಿಸಿದರು. ಹಿರಿಯ ಬರಹಗಾರ ಹಾಗೂ ಸೆವಕ್ಪತ್ರಿಕೆಯ ಸಂಪಾದಕ ವಂದನೀಯ ಚೇತನ್ ಲೋಬೊ ಪ್ರತಿಕ್ರಿಯೆ ನೀಡಿದರು.
ಸಭಾ ಪಾಲಕರಾದ ಖ್ಯಾತ ವಕೀಲ ಎಂ. ಪಿ. ನೊರೊನ್ಹಾರವರು ವಿವಿಧ ವಿಚಾರಗಳನ್ನು ಪ್ರಸ್ತಾವಿಸಿ ಸದಸ್ಯರ ಆಭಿಪ್ರಾಯಗಳನ್ನು ಸಕ್ರಿಯವಾಗಿ ಚರ್ಚಿಸಲು ಅವಕಾಶವನ್ನು ಮಾಡಿಕೊಟ್ಟರು ಮತ್ತು ಮುಕ್ತ ಚರ್ಚೆ ನಡೆಯಿತು. ಸದಸ್ಯರ ಎಲ್ಲಾ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಈ ಕೆಳಗಿನ ಐದು ಠರಾವುಗಳನ್ನು ನಿರ್ಣಯಿಸಲಾಯಿತು ಮತ್ತು ಕಾನೂನು ಆಯೋಗಕ್ಕೆ ಸದರಿ ವಿಚಾರಗಳ ಬಗ್ಗೆ ಮನವಿ ನೀಡಲು ನಿರ್ಧರಿಸಲಾಯಿತು.
1. ಭಾರತ ಸರಕಾರದ ಕಾನೂನು ಆಯೋಗವು ಪ್ರಕಟಿಸಿದ ಪ್ರಶ್ನಾವಳಿಯನ್ನು ಉತ್ತರಿಸಲು ಹಾಗೂ ಆಯೋಗವು ಬಯಸಿರುವಂತೆ ಯಾವುದೇ ಸಲಹೆಗಳನ್ನು ನೀಡಲು ಕ್ರೈಸ್ತ ಸಮುದಾಯಕ್ಕೆ ಸಾಧ್ಯವಾಗುತ್ತಿಲ್ಲ. ಕಾರಣ ಉದ್ದೇಶಿತ ಶಾಸನದ ಕರಡು ಪ್ರತಿ, ವಿಷಯಗಳು ಮತ್ತು ವಿವರಗಳನ್ನು ತಿಳಿಯಪಡಿಸಿಲ್ಲ. ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಯಾವುದೇ ಚರ್ಚೆಯನ್ನು ಪ್ರಾರಂಭಿಸುವ ಮೊದಲು ಕಾನೂನಿನ ಕರಡು ಪ್ರತಿಯನ್ನುಎಲ್ಲಾ ಪಾಲುದಾರರಿಗೆ ಮತ್ತು ಸಾರ್ವಜನಿಕರಿಗೆ ಲಭ್ಯವಾಗುವಂತೆ ಕೋರಲಾಗಿದೆ.
2.ಮೇಲಿನ ಆಕ್ಷೇಪಣೆಗೆ ಚ್ಯುತಿಯಿಲ್ಲದೆ, 21ನೇ ಕಾನೂನು ಆಯೋಗವು ಈಗಾಗಲೇ ಅಸ್ತಿತ್ವದಲ್ಲಿರುವ ಕುಟುಂಬ ಕಾನೂನುಗಳಿಗೆ ಸುಧಾರಣೆಗಳನ್ನು ಸೂಚಿಸುವ ವರದಿಯನ್ನು ಈಗಾಗಲೇ ಸಲ್ಲಿಸಿದೆ. ಆ ವರದಿಯಲ್ಲಿರುವ ಶಿಫಾರಸುಗಳನ್ನು ಸೂಕ್ತ ರೀತಿಯಲ್ಲಿ ಪ್ರಸ್ತುತ ಕಾನೂನು ಆಯೋಗವು ಕಾರ್ಯಗತಗೊಳಿಸಬೇಕು ಎಂಬುದು ಮಂಗಳೂರು ಧರ್ಮಪ್ರಾಂತ್ಯದ ಸಮುದಾಯದಅಭಿಪ್ರಾಯ. ಹೀಗಿರುವಾಗ, ಏಕರೂಪ ನಾಗರಿಕ ಸಂಹಿತೆಯನ್ನು ಕೈಗೆತ್ತಿಕೊಳ್ಳಲು ಯಾವುದೇ ತುರ್ತು ಅಥವಾ ಅವಶ್ಯಕತೆ ಉಂಟಾಗಿಲ್ಲ.
3.ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಯ ಸಾಂವಿಧಾನಿಕ ಪ್ರಾಮುಖ್ಯತೆ ಮತ್ತು ಧನಾತ್ಮಕ ಪರಿಣಾಮಗಳನ್ನು ಮಂಗಳೂರು ಧರ್ಮಪ್ರಾಂತ್ಯದ ಕ್ರಿಶ್ಚಿಯನ್ ಸಮುದಾಯವು ಪರಿಗಣಿಸಿ ಪ್ರಸ್ತಾವಿತ ಶಾಸನದ ಅನುಷ್ಠಾನಕ್ಕೆ ಪೂರ್ವಭಾವಿಯಾಗಿ ಕ್ರೈಸ್ತರು ಸೇರಿದಂತೆಎಲ್ಲಾ ಸಮುದಾಯಗಳ ಎಲ್ಲಾ ಪಾಲುದಾರರನ್ನು ಒಳಗೊಂಡಿರುವ ಪ್ರತಿನಿಧಿ ಸಮಿತಿಯನ್ನು ರಚಿಸುವ ಮೂಲಕ ವಿಸ್ತಾರ ಸ್ವರೂಪದ ಮಾತುಕತೆ ಆರಂಭಿಸಿ ಸಮಾಲೋಚನೆ ನಡೆಸಲು ಮಂಗಳೂರು ಧರ್ಮಪ್ರಾಂತದ ಕ್ರೈಸ್ತ ಸಮುದಾಯ ಆಗ್ರಹಿಸುತ್ತದೆ.
4. ವೈಯಕ್ತಿಕ ಕಾನೂನು ಭಾರತೀಯ ಕ್ರೈಸ್ತರು ಪಾಲಿಸುವ ಧರ್ಮದ ಭಾಗವಾಗಿದೆ. ಪ್ರಸ್ತಾವಿತ ಸಂಹಿತೆಯು ಕ್ರೈಸ್ತ ಧಾರ್ಮಿಕತೆಯಲ್ಲಿ ಮಾಡುವ ಅನಪೇಕ್ಷಿತ ಹಸ್ತಕ್ಷೇಪವಾಗಿದೆ ಎಂಬುದು ಸಮುದಾಯದ ದೃಢ ಅಭಿಪ್ರಾಯ. ಭಾರತದ ಸಂವಿಧಾನದ ವಿಧಿ ೨೫ರ ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕುಗಳು ವಿಧಿ 29 ಮತ್ತು 30ರ ಅಡಿಯಲ್ಲಿ ನೀಡಲಾದಅಲ್ಪಸಂಖ್ಯಾತರ ಹಕ್ಕುಗಳು. ಕ್ರೈಸ್ತರ ವೈಯಕ್ತಿಕ ಕಾನೂನುಗಳು ಸಮುದಾಯದಧರ್ಮ, ಪದ್ಧತಿಗಳು ಮತ್ತುರೀತಿ-ನೀತಿಗಳ ಮೇಲೆ ನಿಂತಿವೆ ಹಾಗೂ ಸಂವಿಧಾನದದಿಂದ ಸಂರಕ್ಷಿತವಾಗಿವೆ.
5.ಇನ್ಯಾವುದೇ ವೈಯಕ್ತಿಕ ಕಾನೂನನ್ನು ಕ್ರೈಸ್ತ ಅಲ್ಪಸಂಖ್ಯಾತರ ಮೇಲೆ ವಿಸ್ತರಿಸುವ ಇರಾದೆಯ ವಿರುದ್ಧ ಕ್ರೈಸ್ತ ಸಮುದಾಯವು ಬಲವಾದ ಆಕ್ಷೇಪಣೆಯನ್ನು ದಾಖಲಿಸುತ್ತದೆ. ಅಂಥಹಯಾವುದೇ ಪ್ರಯತ್ನ ಭಾರತೀಯ ಕ್ರೈಸ್ತರ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕಗುರುತು ಮತ್ತು ಅನನ್ಯತೆಯನ್ನು ನಾಶಪಡಿಸುತ್ತದೆ.
ಸಭೆಯಲ್ಲಿ ಮಂಗಳೂರು ಬಿಷಪ್ಆತೀ ವಂದನೀಯಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ಶ್ರೆಷ್ಠಗುರು ವಂದನೀಯ ಮ್ಯಾಕ್ಸಿಮ್ ನೊರೊನ್ಹಾ, ಚಾನ್ಸೆಲರ್ ವಂದನೀಯ ಡಾ. ವಿಕ್ಟರ್ಜೋರ್ಜ್ ಡಿಸೋಜಾ, ಮಾಜಿ ಶಾಸಕ ಜೆ. ಆರ್ ಲೋಬೋ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ, ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ನವೀನ್ ಡಿಸೋಜ, ಕರ್ನಾಟಕ ಸಿಆರ್ಐ ಅಧ್ಯಕ್ಷ ಭೆಥನಿ ಧರ್ಮಭಗಿನಿ ಸಿಸಿಲಿಯಾ ಮೆಂಡೊನ್ಸಾ, ಸಂಪರ್ಕಾಧಿಕಾರಿ ವಂದನೀಯ ಜೆ ಬಿ ಸಲ್ಡಾನ್ಹಾ ಹಾಗೂ ರೋಯ್ ಕ್ಯಾಸ್ತೆಲಿನೊ, ಕಥೊಲಿಕ್ ಸಭಾ ಅಧ್ಯಕ್ಷ ಆಲ್ವಿನ್ಡಿಸೋಜಾ, ಹಲವಾರು ಧರ್ಮಗುರುಗಳು, ಧರ್ಮಭಗಿನಿಯರು, ವಕೀಲರು, ವೈದ್ಯರು,ಸಾಮಾಜಿಕ ಮುಖಂಡರು ಹಾಜರಿದ್ದರು.