ಬಂಟ್ವಾಳ, ಜು.09 (DaijiworldNews/AK): ಅಮರನಾಥ ಯಾತ್ರೆಗೆ ತೆರಳಿದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಸೇರಿದಂತೆ ವಿವಿಧ ತಾಲೂಕಿನ ಒಟ್ಟು 20 ಮಂದಿ ಯಾತ್ರಾರ್ಥಿಗಳು ಸೇಫ್ ಆಗಿ ಸಿ.ಆರ್.ಪಿ.ಎಫ್ ನ ಕ್ಯಾಂಪ್ ನಲ್ಲಿ ಇದ್ದೇವೆ ಎಂದು ತಂಡದ ನೇತೃತ್ವದ ವಹಿಸಿರುವ ನರಿಕೊಂಬಿನ ಸಂತೋಷ್ ಮಾರುತಿನಗರ ಅವರು ತಿಳಿಸಿದ್ದಾರೆ.
ಭೂಕುಸಿತದಿಂದ ಅಮರನಾಥ ಯಾತ್ರಿಗಳು ಪಾರಾದ ಬಗ್ಗೆ ವರದಿ ಬಂದ ಬೆನ್ನಲ್ಲೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಸಂತೋಷ್ ಎಂಬವರ ಜೊತೆ ಯಾತ್ರೆಗೆ ತೆರಳಿದ 20 ಮಂದಿ ಯಾತ್ರಾರ್ಥಿಗಳು ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ.
ಧಾರಾಕಾರ ಮಳೆಗೆ ಭೂಕುಸಿತ ಕಂಡು ಬಂದಿದ್ದು ಯಾತ್ರಾರ್ಥಿಗಳು ಜಾಗರೂಕತೆಯಿಂದ ಇರುವಂತೆ ತಿಳಿಸಿದ್ದಾರೆ ಮತ್ತು ಸದ್ಯ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ರಂಭಾನ್ ಎಂಬ ಸ್ಥಳದಲ್ಲಿ ಗುಡ್ಡ ಕುಸಿತ ಕಂಡ ಹಿನ್ನೆಲೆಯಲ್ಲಿ ಅಮರನಾಥ ದೇವಾಲಯಕ್ಕೆ ತೆರಳುವ ದಾರಿ ಸಂಪೂರ್ಣ ಸ್ಥಗಿತಗೊಂಡಿದೆ.
ಮಣ್ಣು ತೆರವು ಕಾರ್ಯ ನಡೆಯುತ್ತಿದೆಯಾದರೂ ಮತ್ತೆ ಭೂಕುಸಿತ ಕಂಡು ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸದ್ಯ ಯಾತ್ರೆಯನ್ನು ಸ್ಥಗಿತ ಮಾಡಿದ್ದಾರೆ.
ಸಂತೋಷ್ ನರಿಕೊಂಬು ಅವರನ್ನೊಳಗೊಂಡ 20 ಜನ ಯಾತ್ರಾರ್ಥಿಗಳ ತಂಡ ಭೂಕುಸಿತ ಕಂಡ ಕಾರಣ ಮೇಲೆ ಅಮರನಾಥ ದೇವಲಯಕ್ಕೂ ಹೋಗಲು ಸಾಧ್ಯವಾಗದೆ, ಅತ್ತ ಕೆಳಗೆ ಜಮ್ಮು ಕಾಶ್ಮೀರ ಕ್ಕೂ ಹೋಗಲು ಸಾಧ್ಯವಾಗದೆ ಸಿ.ಆರ್.ಪಿ.ಎಫ್ ಕ್ಯಾಂಪ್ ನಲ್ಲೇ ಸುರಕ್ಷಿತವಾಗಿದ್ದಾರೆ. ಜುಲೈ 4ರಂದು ರೈಲು ಮುಖಾಂತರ ಯಾತ್ರೆ ಕೈಗೊಂಡಿದ್ದು, ಅಮರನಾಥ ಯಾತ್ರೆ ಬಳಿಕ ವೈಷ್ಣೋದೇವಿ ಯಾತ್ರೆ ಮಾಡಲಿದ್ದಾರೆ.
ನರಿಕೊಂಬುನಿಂದ ಒಟ್ಟು 5 ಮಂದಿ, ಮಂಗಳೂರು ಅಡ್ಯಾರನಿಂದ 8, ಪುತ್ತೂರಿನಿಂದ 1, ಉಡುಪಿಯಿಂದ 1 , ಮೂಡಬಿದಿರೆಯಿಂದ 1 , ಸಜೀಪದಿಂದ 3, ಉಪ್ಪಿನಂಗಡಿ ಕರಾಯದಿಂದ 1 ಹೀಗೆ ಒಟ್ಟು 20 ಯಾತ್ರಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಯಿಂದ ಅಮರನಾಥ ಯಾತ್ರೆಗೆ ತೆರಳಿದ್ದಾರೆ.
ಕಳೆದ ಬಾರಿ ಇದೇ ರೀತಿಯಲ್ಲಿ ಭೂಕುಸಿತ ಕಂಡ ಸಂದರ್ಭದಲ್ಲಿ ಇಲ್ಲಿನ ಯಾತ್ರಾರ್ಥಿಗಳು ಅಲ್ಲಿ ಸಿಲುಕಿಕೊಂಡಿದ್ದರು.ಅ ಸಂದರ್ಭದಲ್ಲಿ ಕೂಡ ಸುರಕ್ಷಿತವಾಗಿ ಯಾವುದೇ ತೊಂದರೆಯಾಗದೆ ಹಿಂದುರಿಗಿದ್ದರು.