ಬಂಟ್ವಾಳ, ಜು 09 (DaijiworldNews/HR): ತಾಲೂಕಿನ ಸಜೀಪ ಮುನ್ನೂರು ಗ್ರಾಮದ ನಂದಾವರ ಗುಂಪು ಮನೆ ಎಂಬಲ್ಲಿ ಗುಡ್ಡ ಜರಿದು ಓರ್ವ ಮಹಿಳೆ ಮೃತಪಟ್ಟ ಘಟನೆ ನಡೆದ ಸ್ಥಳಕ್ಕೆ ಶನಿವಾರ ಸಂಜೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರಕಾರದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲಾಗಿದ್ದು, ರಿಪೇರಿಗೆ ಕೂಡ ಪರಿಹಾರ ಕಲ್ಪಿಸುವ ಬಗ್ಗೆ ಭರವಸೆ ನೀಡಿದರು.
ಇನ್ನು ಘಟನೆಯಲ್ಲಿ ಝರಿನಾ ಮೃತಪಟ್ಟಿದ್ದು, ಇವರ ಮಗಳು ಸಫಾ ಅವರು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವಳ ಆಸ್ಪತ್ರೆಯ ಚಿಕಿತ್ಸೆ ಯ ಸಂಪೂರ್ಣ ವೆಚ್ಚವನ್ನು ಸರಕಾರದಿಂದ ಭರಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಯವರಿಗೆ ಸೂಚನೆ ನೀಡಿದ್ದೇನೆ. ಘಟನೆ ನಡೆದ ಪ್ರದೇಶದಲ್ಲಿ ಇನ್ನೂ ಹಲವಾರು ಮನೆಗಳು ಅಪಾಯದಲ್ಲಿದ್ದು ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ ಎಂದರು.
ಘಟನಾ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಇಂತಹ ಯಾವುದೇ ಅವಘಡ ಗಳು ಸಂಭವಿಸದಂತೆ ತಡೆಗೋಡೆ ನಿರ್ಮಾಣ ದ ಬಗ್ಗೆ ಚಿಂತನೆ ನಡೆಸಲಾಗಿದೆ. ಸಂಬಂಧಿಸಿದ ಇಂಜಿನಿಯರ್ ಮೂಲಕ ತಡೆಗೋಡೆ ನಿರ್ಮಾಣಕ್ಕೆ ಕ್ರಿಯಯೋಜನೆ ತಯಾರಿಸಲು ಜಿಲ್ಲಾಧಿಕಾರಿ ಗೆ ಸೂಚಿಸಿದ್ದೇನೆ. ಯಾವ ರೀತಿಯಲ್ಲಿ ಅನುದಾನಗಳನ್ನು ಬಳಕೆ ಮಾಡಿಕೊಂಡು ತಡೆಗೋಡೆ ನಿರ್ಮಾಣಮಾಡಬಹುದು ಎಂಬುದನ್ನು ನೋಡಿಕೊಂಡು ಯೋಜನೆ ರೂಪಿಸುತ್ತೇವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಅಶ್ವನಿ ಕುಮಾರ್ ರೈ,ಬೇಬಿಕುಂದರ್, ಸುದೀಪ್ ಶೆಟ್ಟಿ, ಮಹಮ್ಮದ್ ನಂದಾವರ,ಸಿದ್ದೀಕ್ ಗುಡ್ಡೆಯಂಗಡಿ, ಸಮಾದ್ ಕೈಕಂಬ, ಇಬ್ರಾಹಿಂ ನವಾಜ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ತಹಶಿಲ್ದಾರ್ ಎಸ್.ವಿ.ಕೂಡಲಗಿ, ಪಿ.ಡಿ.ಒ.ಲಕ್ಷಣ್, ಡಿ.ವೈ.ಎಸ್.ಪಿ.ಪ್ರತಾಪ್ ಥೋರಾಟ್ ಮತ್ತಿತರರು ಉಪಸ್ಥಿತರಿದ್ದರು.