ಉಡುಪಿ,ಏ02(AZM):ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಇರುವ ಸೀರೆಯನ್ನು ಮಾರಾಟ ಮಾಡುತ್ತಿರುವ ಹಿನ್ನಲೆ ಪ್ರಖ್ಯಾತ ಬಟ್ಟೆ ಮಳಿಗೆ ಉದ್ಯಾವರದ ಜಯಲಕ್ಷ್ಮಿ ಸೇಲ್ಸ್ ಗೆ ಚುನಾವಣಾ ಆಯೋಗದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಮೋದಿ ಬ್ರಾಂಡ್ ಸೀರೆ ಮಾರಾಟದ ಶಂಕೆಯಲ್ಲಿ ಉದ್ಯಾವರ ಜಯಲಕ್ಷ್ಮಿ ಕ್ಲೋತ್ ಸ್ಟೋರ್ಸ್ ಗೆ ಇಂದು ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ.ಮೋದಿ ಸೀರೆ ಮಾರಾಟದ ಬಿಲ್ ಸಿಕ್ಕಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನೇತೃತ್ವದ ತಂಡ ಪರಿಶೀಲನೆಗಾಗಿ ಜಯಲಕ್ಷ್ಮೀ ಕ್ಲೋತ್ ಸ್ಟೋರ್ಸ್ ಗೆ ಬಂದಿದ್ದು, ಈ ವೇಳೆ ಸಂಸ್ಥೆಯ ಮಾಲಕರು ತನಿಖೆಗೆ ಸಹಕರಿಸದೆ ಉಡಾಫೆ ತೋರಿದ್ದಾಗಿ ತಿಳಿದು ಬಂದಿದೆ.
ಈ ಸಂದರ್ಭ ಚುನಾವಣಾಧಿಕಾರಿಗಳು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪೊಲೀಸ್ ಭದ್ರತೆಯೊಂದಿಗೆ ಪರಿಶೀಲನೆ ನಡೆದಿರುವುದಾಗಿ ತಿಳಿದು ಬಂದಿದೆ.