ಬಂಟ್ವಾಳ, ಜು 7 (DaijiworldNews/MS): ಸಜಿಪಮುನ್ನೂರಿನ ನಂದಾವರದಲ್ಲಿ ಇಂದು ಬೆಳಗ್ಗೆ ಗುಡ್ಡ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಮೃತಪಟ್ಟ ಝರೀನಾರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಮತ್ತು ಮನೆ ದುರಸ್ತಿಗೆ 1.20 ಲಕ್ಷ ರೂ. ಪರಿಹಾರವನ್ನು ಸರಕಾರದಿಂದ ನೀಡಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಮತ್ತೆ ಇಂತಹ ಅನಾಹುತಗಳು ನಡೆಯದಂತೆ ಎಚ್ಚರಿಕೆ ವಹಿಸಲು ತಾಲೂಕಿನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಜಿಲ್ಲೆಯಲ್ಲಿಇಂತಹ ಪರಿಸ್ಥಿತಿಯಿರುವ ಯಾವುದೇ ಕುಟುಂಬಗಳಾದರೂ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರವಾಗಿ ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಸ್.ವಿ.ಕೂಡಲಗಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ , ಪಿಡಿಒ ಲಕ್ಷ್ಮಣ್ ಮತ್ತು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ನಂದಾವರ ಗುಂಪು ಮನೆ ಎಂಬಲ್ಲಿ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮುಹಮ್ಮದ್ ಎಂಬವರ ಪತ್ನಿ ಝರೀನಾ(47) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಪುತ್ರಿ ಸಫಾ(20) ಅವರನ್ನು ರಕ್ಷಿಸಲಾಗಿದೆ.