ಬೆಳ್ತಂಗಡಿ, ಜು 07 (DaijiworldNews/AK): ಐತಿಹಾಸಿಕ ಪ್ರವಾಸಿ ತಾಣವಾಗಿರುವ ನಡ ಗ್ರಾಮದಲ್ಲಿರುವ ಸಾವಿರ ಅಡಿ ಎತ್ತರದ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ಧಾರಾಕಾರ ಸುರಿಯುತ್ತಿರುವ ಮಳೆಯ ಹಿನ್ನಲ್ಲೆ ಬಂಡೆಯಲ್ಲಿ ನೀರು ಹರಿಯುತ್ತಿದ್ದು, ಮೆಟ್ಟಿಲುಗಳಲ್ಲಿ ಪಾಚಿ ಬೆಳೆದು ಜಾರುವ ಅಪಾಯ ಇರುವುದರಿಂದ ಜು. 7ರಿಂದ ಮುಂದಿನ ಆದೇಶದ ತನಕ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯಾರಣ್ಯಧಿಕಾರಿ ಸ್ವಾತಿ ಅವರು ತಿಳಿಸಿದ್ದಾರೆ.
ಧರ್ಮಸ್ಥಳಕ್ಕೆ ತುಂಬ ಹತ್ತಿರದಲ್ಲಿಯೇ ಗಡಾಯಿಕಲ್ಲು ಕೋಟೆಯಿದೆ. ಇದು ಕುದುರೇಮುಖ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು ಚಾರಣಪ್ರಿಯರ ನೆಚ್ಚಿನ ಸ್ಥಳವಾಗಿದೆ. ಇದನ್ನು ನರಸಿಂಹ ಗಢ, ಜಮಲಾಬಾದ್ ಕೋಟೆ ಎಂದೂ ಕರೆಯುತ್ತಾರೆ.
ಸಮುದ್ರ ಮಟ್ಟದಿಂದ 1,788 ಅಡಿ ಎತ್ತರದಲ್ಲಿರುವ ಈ ಗಡಾಯಿಕಲ್ಲು ಬೆಳ್ತಂಗಡಿ ಪಟ್ಟಣದಿಂದ 8 ಕಿಮೀ ದೂರದಲ್ಲಿದೆ.
ಗಡಾಯಿಕಲ್ಲು ಮಂಗಳೂರಿನಿಂದ ಸುಮಾರು 60 ಕಿ.ಮೀ, ಧರ್ಮಸ್ಥಳದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಬೆಳ್ತಂಗಡಿಗೆ ಹೋಗ ಬೇಕಾಗುತ್ತದೆ. ಅಲ್ಲಿಂದ ಮಂಜೊಟ್ಟಿಗೆ ಬಂದು ಗಡಾಯಿಕಲ್ಲು ಜಾಗ ತಲುಪಬಹುದು.