ಉಡುಪಿ,ಏ02(AZM):ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ರಾಣಿ ಅಬ್ಬಕ್ಕ ಪಡೆಯನ್ನು ರಚಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಅವರ ಮುತುವರ್ಜಿಯಿಂದ ಪ್ರಾರಂಭವಾಗಿರುವ ಪಡೆಯು ಇನ್ನು ಮುಂದೆ ಯಿಂದ ಆರಂಭಿಸಿರುವ ಈ ವಿಶೇಷ ಪಡೆಯು ಬೀದಿ ಕಾಮುಕರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಲಿದೆ.
ರಾಣಿ ಅಬ್ಬಕ್ಕ ಪಡೆಗೆ ಉಡುಪಿ ಎಸ್ ಪಿ ನಿಶಾ ಜೇಮ್ಸ್ ಅವರು ಇಂದು ಚಾಲನೆ ನೀಡಿದ್ದು, ಈ ಪಡೆಯು ಉಡುಪಿ ನಗರದಲ್ಲಿ ಮತ್ತು ಮಣಿಪಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಓಡಾಡುವ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುತ್ತದೆ. ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಲಾ ಕಾಲೇಜು, ಉದ್ಯಾನವನ ಹಾಗೂ ವಾಕಿಂಗ್ ಪ್ರದೇಶಗಳಲ್ಲಿ ಮುಖ್ಯವಾಗಿ ಬೆಳಗ್ಗೆ ಹಾಗೂ ಸಂಜೆ ವೇಳೆ ಈ ಪಡೆಯು ಜಾಗೃತವಾಗಿದ್ದು, ಗಸ್ತು ತಿರುಗುತ್ತಿರುತ್ತದೆ.
ಜಿಲ್ಲೆಯ ಏಕೈಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಸ್ತುತ 15 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಒಬ್ಬರು ಪೊಲೀಸ್ ನಿರೀಕ್ಷಕರು, ಒಬ್ಬರು ಮಹಿಳಾ ಉಪನಿರೀಕ್ಷಕರು, ಇಬ್ಬರು ಸಹಾಯಕ ಪೊಲೀಸ್ ಉಪ ನಿರೀಕ್ಷಕರು , ಇಬ್ಬರು ಮಹಿಳಾ ಹೆಡ್ಕಾನ್ಟೇಬಲ್ಗಳು ಮತ್ತು 9 ಮಂದಿ ಮಹಿಳಾ ಸಿಬ್ಬಂದಿಗಳಿದ್ದಾರೆ.
ರಾಣಿ ಅಬ್ಬಕ್ಕ ಪಡೆಯ ವಾಹನದಲ್ಲಿ ಮಹಿಳಾ ಠಾಣೆ ಮಹಿಳಾ ಉಪ ನಿರೀಕ್ಷಕರು ಅಥವಾ ಸಹಾಯಕ ಪೊಲೀಸ್ ನಿರೀಕ್ಷಕರು, ಮೂವರು ಮಹಿಳಾ ಪೊಲೀಸ್ ಸಿಬ್ಬಂದಿ, ಓರ್ವ ಪುರುಷ ಸಿಬ್ಬಂದಿ ಕರ್ತವ್ಯ ನಿರ್ವಹಿಸಿಕೊಂಡು ಇರುತ್ತಾರೆ. ಈ ಪಡೆಯು ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಕಾರ್ಯಾಚರಿಸಲಿದೆ.