ಮಂಗಳೂರು, ಏ 02(SM): ನವಮಂಗಳೂರು ಬಂದರು ಬ್ರೇಕ್ ವಾಟರ್ನಿಂದ ಸುಮಾರು 20 ಮೈಲ್ ಸಮುದ್ರ ದೂರದಲ್ಲಿ ಸಿಂಗಾಪುರ ದೇಶಕ್ಕೆ ಸೇರಿದ ಎಂವಿ ಚೀನಯಾ ನಾರೀ ಹೆಸರಿನ ಸರಕು ಹಡಗಿಗೆ ಮೀನುಗಾರಿಕಾ ಬೋಟ್ ಡಿಕ್ಕಿ ಹೊಡೆದು ಹಾನಿ ಸಂಭವಿಸಿರುವ ಬಗ್ಗೆ ಕೋಸ್ಟ್ ಗಾರ್ಡ್ ಅಧಿಕಾರಿಗಳು ಇದೀಗ ಮೀನುಗಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಸರಕು ಹಡಗು ಸಿಂಗಾಪುರದಿಂದ ಕೊಲಂಬೋಗೆ ಹೊರಟಿತ್ತು. ಮಾರ್ಚ್ 29ರಂದು ಈ ಘಟನೆ ನಡೆದಿದ್ದು, ಜಲಪದ್ಮಾವತಿ 2 ಹೆಸರಿನ ಬೋಟು ರಾತ್ರಿ 12.30ರಿಂದ 1 ಗಂಟೆಯ ನಡುವೆ ಡಿಕ್ಕಿ ಹೊಡೆದಿರುವ ಬಗ್ಗೆ ತಿಳಿದು ಬಂದಿದ್ದು, ಇದಕ್ಕೆ ಬೋಟಿನಲ್ಲಿ ಕುರುಹು ಕೂಡ ಪತ್ತೆಯಾಗಿದೆ. ಪದ್ಮಾವತಿ ಮೀನುಗಾರಿಕಾ ಹಡಗಿನಲ್ಲಿ 9 ಮಂದಿ ಮೀನುಗಾರರು ಇದ್ದು, ಅಪಾಯದಿಂದ ಪಾರಾಗಿದ್ದಾರೆ. ಬೆಂಗ್ರೆ ನಿವಾಸಿ ಶ್ರೀನಿವಾಸ ಸಾಲ್ಯಾನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ಇದಾಗಿದ್ದು, ಅಪಾರ ನಷ್ಟ ಸಂಭವಿಸಿದೆ.
ಇದೇ ವೇಳೆ ಮೀನುಗಾರಿಕೆ ನಡೆಸುವ ಬೋಟಿನ ಮಾಲಕರಿಗೆ ಎಚ್ಚರಿಕೆ ನೀಡಿರುವ ಕೋಸ್ಟ್ಗಾರ್ಡ್ ಅಧಿಕಾರಿಗಳು ಇನ್ಮುಂದೆ ಎಲ್ಲಾ ಮೀನುಗಾರಿಕಾ ಬೋಟುಗಳು ಆಟೋಮ್ಯಾಟಿಕ್ ಐಡೆಂಟಿಫಿಕೇಶನ್ ಸಿಸ್ಟಂ ಅಳವಡಿಸಿಕೊಳ್ಳಬೇಕು ಹಾಗೂ ಬೋಟಿನ ಎರಡೂ ಬದಿಗಳಿಗೆ ನ್ಯಾವಿಗೇಶನ್ ಲೈಟ್ ಹಾಕಬೇಕು. ತುರ್ತು ಸಂದರ್ಭದಲ್ಲಿ ಸಿಎಸ್ಪಿ ಕಂಟ್ರೋಲ್ ರೂಂ 1093ಕ್ಕೆ ಕರೆ ಮಾಡಬೇಕು ಎಂದು ಮಲ್ಪೆ ಸಿಎಸ್ಪಿಯ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.