ಉಡುಪಿ, ಜು 06 (DaijiworldNews/HR): ಉಡುಪಿ ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ಕಳೆದ ಐದು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಗುತ್ತಿದ್ದು, ಇದರ ಪರಿಣಾಮ ಉಡುಪಿಯ ವಿವಿಧೆಡೆ ತಗ್ಗು ಪ್ರದೇಶ ಜಲವೃತವಾಗಿದೆ. ಜನರ ರಕ್ಷಣೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಎನ್ಡಿಆರ್ಎಫ್ ಮತ್ತು ಜನರ ರಕ್ಷಣೆಗೆ ಅಗತ್ಯವಿದ್ದಲ್ಲಿ ಎಸ್ಡಿಆರ್ಎಫ್ ಸಜ್ಜಾಗಿದೆ ಎಂದರು.
ಇನ್ನು ಒಂಬತ್ತು ಪ್ರದೇಶಗಳನ್ನು ಗುರುತಿಸಿ ಅವರ ರಕ್ಷಣೆಗೆ ಬೋಟ್ ವ್ಯವಸ್ಥೆ ಮಾಡಲಾಗಿದೆ. ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶಗಳ ನಿವಾಸಿಗಳನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದ್ದೇವೆ. ಈ ಪ್ರದೇಶಕ್ಕೆ ಟಾಸ್ಕ್ ಫೋರ್ಸ್ ತಂಡ, ಎಲ್ಲಾ ಇಲಾಖೆಗಳು ಮತ್ತು ಸ್ಥಳೀಯ ಮುಖಂಡರು ನಮಗೆ ಸಹಾಯ ಮಾಡುತ್ತಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದು ಅಗತ್ಯ ಮಾಹಿತಿಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ನಿರ್ದೇಶನ ನೀಡಿದ್ದಾರೆ ಎಂದಿದ್ದಾರೆ.
ಸಹಾಯಕ್ಕಾಗಿ ಜನರು ಕಂಟ್ರೋಲ್ ರೂಮ್ 24x7,1077 ಗೆ ಕರೆ ಮಾಡಬಹುದು. ಈಗಾಗಲೇ ನಾವು ಸೇತುವೆಯನ್ನು ದಾಟುವಾಗ ಜಾಗರೂಕರಾಗಿರಿ ಮತ್ತು ಸಮುದ್ರದ ಅಲೆಗಳು ಬಲವಾಗಿ ಹರಿಯುವುದರಿಂದ ಸಮುದ್ರಕ್ಕೆ ಇಳಿಯದಂತೆ ಜಾಗೃತಿ ಮೂಡಿಸುತ್ತಿದ್ದೇವೆ. ಯಾವುದೇ ಕಟ್ಟಡಗಳಿಗೆ ಹಾನಿಯಾದರೆ ತಕ್ಷಣವೇ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.