ಕುಂದಾಪುರ, ಜು 5 (DaijiworldNews/MS): ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಆಕಸ್ಮಿಕವಾಗಿ ವಾಹನ ಸಹಿತ ಆಯಾತಪ್ಪಿ ಕೆರೆಗೆ ಜಾರಿಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತೆಕ್ಕಟ್ಟೆ ಸಮೀಪದ ಮಣೂರಿನ ಸಮೀಪ ಜು.4 ರ ತಡರಾತ್ರಿ 11.30ರ ಸುಮಾರಿಗೆ ಸಂಭವಿಸಿದೆ.
ಮೃತರನ್ನು ಕೆದೂರು ಗ್ರಾಮ ಪಂಚಾಯತ್ ಮಲ್ಯಾಡಿ ಗ್ರಾಮದ ನಿವಾಸಿ ದಿನಕರ ಶೆಟ್ಟಿ (46) ಎಂದು ಗುರುತಿಸಲಾಗಿದೆ.
ಮಣೂರಿನ ಹಳ್ಳಿಮನೆ ಹೋಟೆಲ್ ನಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದಿನಕರ ಶೆಟ್ಟಿಎಂದಿನಿಂದ ಕೆಲಸ ಮುಗಿಸಿ ತನ್ನ ಮ್ಯಾಸ್ಟ್ರೊ ವಾಹನದ ಮೂಲಕ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮನೆಯ ಅನತಿ ದೂರದಲ್ಲಿರುವ ದೇವರ ಕೆರೆಗೆ ಆಕಸ್ಮಿಕವಾಗಿ ವಾಹನ ಸಹಿತ ಆಯಾತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ.
ಪತ್ನಿ ಶೀಲಾ ಶೆಟ್ಟಿ ಅವರು ತನ್ನ ಗಂಡ ತಡರಾತ್ರಿಯಾದರೂ ಕೂಡಾ ಮನೆಗೆ ಬಾರದೇ ಇರುವ ಬಗ್ಗೆ ಅನುಮಾನಗೊಂಡು, ಪರಿಸರದವರಿಗೆ ಮಾಹಿತಿ ನೀಡಿ ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ತತ್ಕ್ಷಣವೇ ಕೋಟ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ, ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆನೀರು ಸಂಗ್ರಹವಾಗಿರುವ ಪರಿಣಾಮ ರಕ್ಷಣಾ ಕಾರ್ಯಕ್ಕೆ ಮಲ್ಪೆಯ ಈಶ್ವರ್ , ಜೀವನ ಮಿತ್ರದ ನಾಗರಾಜ್ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾದರು.