ಬಂಟ್ವಾಳ, ಜೂ 03 (DaijiworldNews/SM): ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಗೆ ತಾಗಿಕೊಂಡಿರುವ ಗಡಿಯಾರ ಸರಕಾರಿ ಶಾಲೆಯ ಬಳಿ ಗುಡ್ಡ ಕುಸಿತ ಉಂಟಾಗಿದ್ದು, ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ, ಈ ಹಿನ್ನೆಲೆಯಲ್ಲಿ ಇಲ್ಲಿನ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಗಡಿಯಾರ ಎಂಬಲ್ಲಿನ ಸರ್ಕಾರಿ ಶಾಲೆಯ ಕಟ್ಟಡ ಅಪಾಯಕಾರಿ ಸನ್ನಿವೇಶದಲ್ಲಿ ಇದ್ದು ಊರಿನ ಗ್ರಾಮಸ್ಥರ ಆತಂಕ ವ್ಯಕ್ತಪಡಿಸಿದ್ದಾರೆ. ಬಿಸಿರೋಡು – ಅಡ್ಡಹೊಳೆ ಚತುಷ್ಪತ ಹೆದ್ದಾರಿ ಕಾಮಗಾರಿ ನಡೆಯುವ ವೇಳೆ ಶಾಲೆಯ ಕಟ್ಟಡದ ಬದಿವರೆಗೆ ಅಗೆತಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಮಣ್ಣು ಅಗೆದ ಪರಿಣಾಮವಾಗಿ ಇದೀಗ ಗುಡ್ಡಕುಸಿತ ಕಂಡಿದೆ. ಗುಡ್ಡ ಕುಸಿತದಿಂದಾಗಿ ಶಾಲೆಯ ಬಳಿ ನಿರ್ಮಿಸಲಾಗಿರುವ ವಿದ್ಯುತ್ ಸ್ಥಾವರ ಘಟಕವು ಅಪಾಯಕಾರಿ ಸ್ಥಿತಿಯಲ್ಲಿದ್ದು, ಕುಸಿಯುವ ಭೀತಿ ಉಂಟಾಗಿದೆ.
ಸಧ್ಯ ಹೆದ್ದಾರಿ ಇಲಾಖೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದು, ಸೋಮವಾರ ಶಾಲೆಗೆ ರಜೆ ಘೋಷಿಸಲಾಗಿತ್ತು.
"ಅಧಿಕಾರಿಗಳ ಭೇಟಿ, ಪರಿಶೀಲನೆ"
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವಾಂತರ ಅಪಾಯದ ಹಂತದಲ್ಲಿರುವ ಗಡಿಯಾರ ಸರ್ಕಾರಿ ಶಾಲೆ ಹಾಗೂ ವಿದ್ಯುತ್ ಟವರ್ ಸ್ಥಳಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆ ವಹಿಸಿಕೊಂಡ ಕಂಪೆನಿ ಪ್ರಮುಖರು ಭೇಟಿ ನೀಡಿ, ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಭರವಸೆ ನೀಡಿದ್ದಾರೆ. ಸ್ಥಳಕ್ಕೆ ತಹಶಿಲ್ದಾರ್ ಬಿ.ಎಸ್.ಕೂಡಲಗಿ, ಬಿ.ಇ.ಒ.ಜ್ಞಾನೇಶ್ ಹಾಗೂ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪೆನಿಯ ಪ್ರಮುಖರು ಶಾಲೆಗೆ ಬೇಟಿ ನೀಡಿದರು.
ಸ್ಥಳದಲ್ಲಿ ಗುಡ್ಡ ಜರಿತದಿಂದ ಮುಂದೆ ಸಂಭವಿಸಬಹುದಾದ ಅಪಾಯದ ಬಗ್ಗೆ ಮಾಹಿತಿ ಪಡೆದ ಬಳಿಕ ಶಾಲಾ ಮುಖ್ಯೋಪಾಧ್ಯಾಯ ಸದಾನಂದ ಟಿ.ಎಮ್. ಮತ್ತು ಗ್ರಾಮಸ್ಥರ ಜೊತೆ ಅಧಿಕಾರಿಗಳು ಮಾತುಕತೆ ನಡೆಸಿ ಸಮಸ್ಯೆ ಪರಿಹಾರ ಕಂಡುಕೊಳ್ಳುವಲ್ಲಿ ತೀರ್ಮಾನ ತೆಗೆದುಕೊಂಡರು .
ನಾಳೆಯಿಂದಲೇ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದಲ್ಲದೆ,ತಡೆಗೋಡೆ ನಿರ್ಮಿಸಿಕೊಡುವ ಬಗ್ಗೆ ಲಿಖಿತ ವಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.