ಕುಂದಾಪುರ, ಜೂ 03 (DaijiworldNews/HR): ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಮುಷ್ಕರ ನಡೆಯಿತು.
ನಾವು ಸತತ 48 ವರ್ಷಗಳಿಂದ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಾ ಬಂದಿದ್ದು ಈವರೆಗೂ ಯಾವುದೇ ಭದ್ರತೆಗಳಿಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿ ಇದ್ದೇವೆ. ಸರಕಾರ ನಮ್ಮನ್ನು ಖಾಯಂ ನೌಕರರಾಗಿ ಮಾಡಿದರೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಎಲ್ಲಾ ಸಮಸ್ಯೆ ಏಕಕಾಲದಲ್ಲಿ ಬಗೆಹರಿಸಬಹುದು. ನಮಗೆ ಕನಿಷ್ಠ ಕೂಲಿ 21,000 /-ರೂ ಜಾರಿ ಮಾಡಲೇಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ರಾಜ್ಯಾದ್ಯಂತ ಆರೋಗ್ಯ ಪೌಷ್ಠಕ ಸಮೀಕ್ಷೆ ನಡೆಸಲು ಅಂಗನವಾಡಿ ಕಾರ್ಯಕರ್ತೆಯರನ್ನು ಅಧಿಕಾರಿಗಳು ಒತ್ತಾಯಿಸುವುದನ್ನು ನಿಲ್ಲಿಸಬೇಕು. ನಾವು ಯಾವುದೇ ಕಾರಣಕ್ಕೂ ಸರ್ವೇ ಮಾಡುವುದಿಲ್ಲ, ಇಲಾಖಾ ಅಧಿಕಾರಿಗಳು ಸರ್ವೇ ಮಾಡದೆ ಇದ್ದಲ್ಲಿ ಗೌರವ ಧನ ತಡೆಯಿಡಿಯುವ ಆದೇಶವನ್ನು ಮಾಡಿದ್ದಾರೆ. ತಕ್ಷಣ ಆ ಆದೇಶವನ್ನು ಹಿಂಪಡೆಯಬೇಕು ಎಂದು ಮುಷ್ಕರ ನಿರತರು ಸರ್ಕಾರವನ್ನು ಒತ್ತಾಯಿಸಿದರು.
ಈಗಾಗಲೇ ಹಿಂದಿನ ಸರಕಾರ ನಮಗೆ ಸರ್ವೇ ಮಾಡಲು ಇಲಾಖೆಯಿಂದ ಆದೇಶಿಸಲಾಗಿತ್ತು. ಆದರೆ ಹೆಚ್ಚಿನ ಅಂಗನವಾಡಿ ಕಾರ್ಯಕತೆಯರು ಬಿ.ಎಲ್.ಒ ಆಗಿರುವುದರಿಂದ ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಂಡಿರುವ ಕಾರಣಕ್ಕೆ ಹಾಗೂ ನೀತಿಸಂಹಿತೆ ಜಾರಿ ಆಗಿರುವುದರಿಂದ ಆದೇಶವನ್ನು ಮುಂದೂಡಲಾಗಿತ್ತು. ಆದರೆ ಪುನಃ ನಮಗೆ ಸರ್ವೇ ಮಾಡಲು ಆದೇಶ ಮಾಡಲಾಗಿದೆ ಆದರೆ ಜೂನ್ ತಿಂಗಳಲ್ಲಿ 3 ವರ್ಷದ ಅತಿ ಚಿಕ್ಕ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ದಾಖಲಾದಗ ತುಂಬಾ ಜಾಗೃತೆಯಿಂದ ಆ ಮಕ್ಕಳನ್ನು ನಿಭಾಹಿಸಬೇಕಾಗಿರುತ್ತದೆ. 01 ತಿಂಗಳ ಕಾಲ ಈ ಸರ್ವೇಯನ್ನೂ ಮಾಡಬೇಕಾಗಿ ಆದೇಶ ಮಾಡಿದ್ದು ನಾವು ಅಷ್ಟೂ ದಿನ ಹೊರಗಡೆ ಇದ್ದಲ್ಲಿ ಅಂಗನವಾಡಿ ಕೆಲಸ ಕಾರ್ಯಗಳಿಗೆ ತುಂಬಾ ತೊಂದರೆ ಉಂಟಾಗುತ್ತದೆ. ಅದಲ್ಲದೇ ನಮಗೆ ನೀಡಿದಂತಹ ಮೊಬೈಲ್ಗಳು ಹಾಳಾಗಿದ್ದು ವೈಯುಕ್ತಿಕ ಮೊಬೈಲ್ನಲ್ಲಿ ಸರಕಾರಿ ಅ್ಯಪ್ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ.
ಅಂಗನವಾಡಿ_ಫ್ರಾರಂಭಿಕ ಹಂತದಲ್ಲಿ ಆರೋಗ್ಯ ಇಲಾಖೆ ಮತ್ತು ನಮ್ಮ ಇಲಾಖೆ ನಿರ್ವಹಿಸಲು ಯೋಜನೆ ಪ್ರಾರಂಭ ಮಾಡಲಾಗಿತ್ತು. ಚುಚ್ಚು ಮದ್ದು ಆರೋಗ್ಯ ತಪಾಸಣಾ ಕೆಲಸಗಳನ್ನು ನಾವು ನಿರ್ವಹಿಸುತ್ತಿದ್ದೇವು. ಆದರೆ ಈಗಾ 8 ವರ್ಷಗಳಿಂದ ಆರೋಗ್ಯ ಇಲಾಖೆಯ ಕೆಲಸಗಳನ್ನು ನಿರ್ವಹಿಸಲು ಆಶಾ ಕಾರ್ಯಕರ್ತೆಯರನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಅವರಿಗೆ ಭತ್ಯೆಯನ್ನು ನೀಡುತ್ತಾರೆ. ನಾವು ಎರಡು ಇಲಾಖೆಯ ಕೆಲಸ ನಿರ್ವಹಿಸಿದರೂ ನಮಗೆ ಯಾವುದೇ ಭತ್ಯೆಗಳಿಲ್ಲ. ಇನ್ನೂ ಮುಂದೆ ಆರೋಗ್ಯ ಇಲಾಖೆಯ ಯಾವುದೇ ಸರ್ವೇಗಳಿದ್ದರೂ ಆಶಾ ಕಾರ್ಯಕರ್ತೆಯರಿಗೆ ನೀಡಿ ನಮಗೆ ಅಂಗನವಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯದ ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರು, ಜಿಲ್ಲಾಧಿಕಾರಿಗಳಿಗೆ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಿಗೆ ಕೆಲವೊಂದು ಮೇಲ್ವಿಚಾರಕರು ವೈಯಕ್ತಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಅವರನ್ನು ಕೂಡಲೆ ವರ್ಗವಣೆ ಮಾಡಬೇಕು. ಗೌರವ ಧನ ನೀಡುವಾಗ ಪ್ರತಿ ತಿಂಗಳು 05ನೇ ತಾರೀಕಿನೋಳಗೆ ನೀಡಬೇಕು, ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಮೊಟ್ಟೆ ಟೆಂಡರ್ನ್ನು ರದ್ದುಗೊಳಿಸಿ ಪ್ರತಿ ತಿಂಗಳು ಮೊಟ್ಟೆ ಹಣವನ್ನು ಬಾಲವಿಕಾಸ ಸಮಿತಿಯ ಖಾತೆಗೆ ಜಮಾ ಮಾಡಬೇಕು, ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆ ನಡೆಸಲು ಅಧಿಕಾರಿಯವರಿಗೆ ಸೂಚಿಸಬೇಕೆಂದು ಜಿಲ್ಲಾಧಿಕಾರಿ, ಉಪನಿರ್ದೇಶಕರು .ಮ.ಮ.ಆ.ಇಲಾಖೆ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯ ಸಂಘ ದ ಜಿಲ್ಲಾಧ್ಯಕ್ಷೆ ಪಿಲೋಮಿನಾ, ಜಿಲ್ಲಾ ಕಾರ್ಯದರ್ಶಿ ಬೇಬಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.