ಉಡುಪಿ, ಜು 3 (DaijiworldNews/MS): ಭಗವದ್ಗೀತೆಯ ಪ್ರಚಾರ ಕಾರ್ಯಕ್ಕೆ ಆದ್ಯತೆ ನೀಡಿ, ತಮ್ಮ ಮುಂದಿನ ಪರ್ಯಾಯ ಕಾಲದಲ್ಲಿ ಗೀತಾ ಲೇಖನ ಯಜ್ಞ ಹಮ್ಮಿಕೊಂಡಿರುವ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಹನುಮದರ್ಶನವಾಗಿದೆ!
ಪರ್ಯಾಯಪೂರ್ವ ಸಂಚಾರದಲ್ಲಿರುವ ಶ್ರೀಪಾದರು ಭಾನುವಾರ ಭುವನೇಶ್ವರದಲ್ಲಿ ಗೀತಾ ಲೇಖನ ಯಜ್ಞದ ಕುರಿತು ಮಾಹಿತಿ ಹಾಗೂ ಗೀತೆಯ ಬಗ್ಗೆ ಉಪನ್ಯಾಸ ನೀಡುತ್ತಿರುವ ಸಂದರ್ಭ ಬೃಹತ್ ಗಾತ್ರದ ಕೋತಿಯೊಂದು ಬಂದು, ಪುತ್ತಿಗೆ ಶ್ರೀಗಳ ಸಮ್ಮುಖದಲ್ಲಿ ನಿಂತು ನೆರೆದವರನ್ನು ಆಶ್ಚರ್ಯಕ್ಕೀಡು ಮಾಡಿತು.
ಮಾತ್ರವಲ್ಲದೇ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ಮತ್ತವರ ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಆಸನದ ನಡುವೆಯೇ ಬಂದು ಕುಳಿತುಕೊಂಡಿತು.
ಈ ಸಂಧರ್ಭದಲ್ಲಿ ಶ್ರೀಗಳು ಸ್ವಲ್ಪವೂ ವಿಚಲಿತರಾಗದೇ ತಮ್ಮ ಉಪನ್ಯಾಸ ಮುಂದುವರಿಸುತ್ತಿರುವಂತೆಯೇ ಮೈಕ್ ಎಳೆದುಕೊಳ್ಳಲು ಯತ್ನಿಸಿರುವುದು ಶ್ರೀಗಳ ಗೀತಾ ಪ್ರಚಾರ ಕಾರ್ಯ ಮೆಚ್ಚಿ ಸಾಕ್ಷಾತ್ ಮುಖ್ಯಪ್ರಾಣನೇ ಮೆಚ್ಚುಗೆಯ ಮಾತುಗಳನ್ನಾಡಲು ಎಂಬ ಭಾವುಕತೆ ಅಲ್ಲಿ ನೆರೆದವರಲ್ಲಿ ಮನೆಮಾಡಿತ್ತು.