ಕೋಟ, ಜು 02 (DaijiworldNews/SM): ಮೀನುಗಾರರ ಸಮಸ್ಯೆಗಳು ಹಂತ ಹಂತಗಳಲ್ಲಿ ಬಗೆಹರಿಸುವ ಇಚ್ಛಾಶಕ್ತಿ ನಮ್ಮ ಸರಕಾರಕ್ಕಿದೆ ಎಂದು ಬಂದರು, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದರು. ಅವರು ರವಿವಾರ ಕೋಡಿಕನ್ಯಾಣ ಮೀನುಗಾರಿಕೆ ಬಂದರಿನ ವೀಕ್ಷಣೆಗೆ ಆಗಮಿಸಿದ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದರು.
ಕಡಲ್ಕೊರೆತ ಸಮಸ್ಯೆ ಕಾಸರಗೋಡಿನಿಂದ ಕಾರವಾರ- ಗೋವಾದ ತನಕ ಹಬ್ಬಿದೆ. ಇದಕ್ಕೆ ತಾತ್ಕಾಲಿಕ ಪರಿಹಾರ ಸಮಂಜಸವಲ್ಲ. ಹೀಗಾಗಿ ತಜ್ಞರ ಸಮಿತಿಯನ್ನು ನೇಮಿಸಿದ್ದು ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ, ತಾತ್ಕಾಲಿಕ ಪರಿಹಾರ ಬೇಕಾದಲ್ಲಿ ವಿಮರ್ಶೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಕೋಡಿ ಕನ್ಯಾಣ ಸಮಸ್ಯೆಗೂ ಪರಿಹಾರ: ಕೋಡಿ ಕನ್ಯಾಣ, ಹಂಗಾರಕಟ್ಟೆ, ಬೆಂಗ್ರೆ ಮೀನುಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇವರ ದುಃಸ್ಥಿತಿ ನೋಡಿ ನನಗೆ ದುಃಖವಾಗಿದೆ. ಹೀಗಾಗಿ ಹೂಳೆತ್ತುವುದು ಮುಂತಾದ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮೀನುಗಾರಿಕೆ, ಬಂದರು ಇಲಾಖೆ ಜಂಟಿಯಾಗಿ ಯೋಜನೆ ರೂಪಿಸಲಾಗುವುದು ಎಂದರು.
ಕೇಂದ್ರ ಸರಕಾರದ ಸಹಕಾರ ಬೇಕು:- ಬಂದರು, ಮೀನುಗಾರಿಕೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರದ ಅನುದಾನ ಸಾಕಾಗುವುದಿಲ್ಲ. ಹೀಗಾಗಿ ಕೇಂದ್ರ ಸರಕಾರದಲ್ಲಿ ಅನುದಾನಕ್ಕೆ ಬೇಡಿಕೆ ಇಡಲಾಗುತ್ತದೆ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮೊಗವೀರ ಮುಖಂಡ ಡಾ.ಜಿ.ಶಂಕರ್, ಆನಂದ ಸಿ.ಕುಂದರ್, ಮೀನುಗಾರಿಕೆ, ಬಂದರು ಇಲಾಖೆ ಅಧಿಕಾ ಕ್ಯಾ.ಸ್ವಾಮಿ, ಅಂಜನಾ ದೇವಿ, ಶ್ರೀನಿವಾಸ ಮೂರ್ತಿ, ಢಯಾಸ್ ಹಾಗೂ ಮೀನುಗಾರ ಪ್ರಮುಖರು ಉಪಸ್ಥಿತರಿದ್ದರು.