ಬಂಟ್ವಾಳ, ಜು 02 (DaijiworldNews/SM): ತಲೆ ಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಗಾಂಜಾ ಸೇವನೆ ಮಾಡಿ ಪೊಲೀಸ್ ಅತಿಥಿಯಾಗಿ ಜೈಲು ಸೇರಿದ್ದ ವ್ಯಕ್ತಿಯೋರ್ವ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಗೊಂಡ ಬಳಿಕ ಕಳೆದ ಎಂಟು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾತನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಮಂಗಳೂರು ಕೊಟೆಕಾರ್ ಮಜಲು ನಿವಾಸಿ ಮೂಸಬ್ಬ ಅವರ ಮಗ ಸಿದ್ದೀಕ್ ಬಂಧಿತ ಆರೋಪಿ.
ಘಟನೆಯ ವಿವರ
ಆರೋಪಿ ಸಿದ್ದೀಕ್ ಅವರು 2015 ರ ಡಿಸೆಂಬರ್ ನಲ್ಲಿ ಸಾರ್ವಜನಿಕ ಸ್ಥಳವೊಂದರಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಈತನ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಷರತ್ತು ಬದ್ದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಸಿದ್ದೀಕ್ ಅ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ.
2023ರ ಜುಲೈ ೧ರಂದು ಪೊಲೀಸ್ ನಿರೀಕ್ಷಕರಾದ ವಿವೇಕಾನಂದ ಹಾಗೂ ಪೊಲೀಸ್ ಉಪ ನಿರೀಕ್ಷಕರಾದ ಹರೀಶ್ ಎಂ ಆರ್ ಹಾಗೂ ಅಕ್ಷಯ್ ಡವಗಿ, ಸಂಜೀವ ಕೆ , ಭಾರತಿ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಹೆಚ್ ಸಿ ಗಣೇಶ ಪ್ರಸಾದ್ ಪಿ ಸಿ ಯೋಗೇಶ್ ಡಿ.ಎಲ್ ಹಾಗೂ ವಿಜಯ್ ರವರು ಮಾಹಿತಿ ಸಂಗ್ರಹಿಸಿ ಕೇರಳ ಗಡಿ ಭಾಗದ ತಲಪಾಡಿ ಎಂಬಲ್ಲಿ ದಸ್ತಗಿರಿ ಮಾಡಿಕೊಂಡು ಬಂದು ಇಂದು ಜುಲಾಯಿ 2 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿ ಸಿದ್ದೀಕ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ.