ಮಂಗಳೂರು, ಜು 02 (DaijiworldNews/HR): ನಂತೂರು ಮತ್ತು ಕೆಪಿಟಿ ಜಂಕ್ಷನ್ ಗಳಲ್ಲಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಪೈ ಓವರ್ ನಿರ್ಮಾಣದ ಪೂರ್ವಭಾವಿಯಾಗಿ ಮರ, ವಿದ್ಯುತ್ ಕಂಬ ಹಾಗೂ ನೀರಿನ ಪೈಪ್ ಲೈನ್ ತೆರವು ಕಾರ್ಯವನ್ನು ವಾರದೊಳಗೆ ಆರಂಭಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ನಿರ್ದೇಶನ ನೀಡಿದ್ದಾರೆ.
ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ನಡೆದ ದ.ಕ.ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ(ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೆರವು ಕಾರ್ಯ ವಿಳಂಬವಾದರೆ ಗುತ್ತಿಗೆ ದಾರರು ಕಾಮಗಾರಿ ಮುಗಿಸಲು ಸಮಯ ಹೆಚ್ಚು ತೆಗೆದುಕೊಳ್ಳುತ್ತಾರೆ ಹಾಗೂ ವೆಚ್ಚವೂ ಹೆಚ್ಚಾಗುತ್ತದೆ. ಹಾಗಾಗಿ ತರಿತ ಗತಿಯಲ್ಲಿ ಪೂರ್ವಭಾವಿ ಕೆಲಸಗಳನ್ನು ಮುಗಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಗತಿ ಪರಿಶೀಲಿಸಲು ಡಿಸಿಗೆ ಸೂಚನೆ ನೀಡಿದ್ದಾರೆ.
ಇನ್ನು ಎನ್ಎಚ್ಐಎ, ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ಎಲ್ಲ ಕಾಮಗಾರಿ ಪ್ರಗತಿ ಕುರಿತಂತೆ ಪ್ರತಿ 15 ದಿನಕ್ಕೊಮ್ಮೆ ಪರಿಶೀಲನಾ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಸೂಚಿಸಿದರು.
ದ.ಕ. ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಕನ್ನಡ ಗೊತ್ತಿಲ್ಲದ ಇಂಗ್ಲಿಷ್ ಹಾಗೂ ಹಿಂದಿ ಭಾಷೆಮಾತ್ರ ಗೊತ್ತಿರುವ ಅಧಿಕಾರಿಗಳಿಂದಾಗಿ ಗ್ರಾಮೀಣ ಜನತೆಗೆ ವಹಿವಾಟು ನಡೆಸಲು ಭಾಷಾ ತೊಡಕು ಉಂಟಾಗುತ್ತಿದೆ. ಗ್ರಾಮೀಣ ಜನತೆ ಸಹಕಾರಿ ಬ್ಯಾಂಕ್ಗಳತ್ತ ಮುಖಮಾಡುವಂತಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಈ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕನ್ನಡ ಗೊತ್ತಿರದ ಅಧಿಕಾರಿ, ಸಿಬ್ಬಂದಿಗಳ ಪಟ್ಟಿ ಸಿದ್ಧಪಡಿಸಿ ಜಿ.ಪಂ.ಗೆ ಸಲ್ಲಿಸಿ, ಬ್ಯಾಂಕ್ಗಳಲ್ಲಿ ಕನ್ನಡ ಗೊತ್ತಿರುವವರನ್ನು ನೋಡೆಲ್ ಆಗಿ ನೇಮಕಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗೆ ಸೂಚನೆ ನೀಡಿದರು.
ಈ ವೇಳೆ ಮಹಾನಗರ ಪಾಲಿಕೆ ಮೇಯರ್ ಜಯಾನಂದ ಅಂಚನ್, ಜಿ.ಪಂ. ಸಿಇಒ ಡಾ.ಆನಂದ್, ಪಾಲಿಕೆ ಆಯುಕ್ತ ಆನಂದ್ ಇದ್ದರು.