ಕುಂದಾಪುರ, ಜು1 (DaijiworldNews/MS): ಕುಂದಾಪುರ ತಾಲೂಕು ಮುಳ್ಳಿಕಟ್ಟೆ ಜಂಕ್ಷನ್ನಿಂದ ನಾಯಕವಾಡಿ ಜಂಕ್ಷನ್ ತನಕ ಮಾರ್ಗದ ಇಕ್ಕೆಲಗಳಲ್ಲಿ ಕಸದ್ದೇ ರಾಶಿ. ನಿರ್ಜನ ಪ್ರದೇಶದಲ್ಲಿರುವ ಈ ರಸ್ತೆಯ ಎರಡು ಕಡೆಗಳು ಡಂಪಿಂಗ್ಯಾರ್ಡ್ ಆಗಿ ಮಾರ್ಪಟ್ಟಿದೆ. ಈ ರಸ್ತೆಯಲ್ಲಿ ಸಾಗುವಾಗ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಸ್ಥಿತಿ ಕಳೆದ ಎರಡು ವರ್ಷಗಳಿಂದ ಇದೆ.
ಈ ರಸ್ತೆಯ ಇಕ್ಕೆಲಗಳಲ್ಲಿ ನಿರಂತರವಾಗಿ ಕಸ ಎಸೆಯಲಾಗುತ್ತಿದೆ. ಹಲವಾರು ವರ್ಷಗಳಿಂದ ಮನೆಯ ಕಸ, ಕಟ್ಟಡ ನಿರ್ಮಾಣದ ನಿರೂಪಯೂಕ್ತ ಪರಿಕರಗಳು, ಹಸಿ ಕಸ, ಒಣ ಕಸ, ಕೋಳಿ ತ್ಯಾಜ್ಯ ಹೀಗೆ ಎಲ್ಲ ರೀತಿಯ ಕಸವನ್ನು ಇಲ್ಲಿಯೇ ಅನಧಿಕೃತವಾಗಿ ವಿಲೇ ಮಾಡಲಾಗುತ್ತಿದೆ.
ಇಲ್ಲಿ ತ್ಯಾಜ್ಯ ಎಸೆಯುವ ಪರಿಪಾಠ ಇಂದು ನಿನ್ನೆಯದಲ್ಲ. ನಿರಂತವಾಗಿ ಇಲ್ಲಿ ಕಸವನ್ನು ತಂದು ಸುರಿಯಲಾಗುತ್ತಿದೆ. ಮನೆ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ ತಂದು ಎಸೆಯಲಾಗುತ್ತಿದೆ. ಹಸಿ ಕಸ, ಮೀನು ಮಾಂಸದ ಚೂರುಗಳು, ಕೊಳೆತ ಪದಾರ್ಥಗಳನ್ನು ಎಸೆಯುವುದರಿಂದ ಬೀದಿನಾಯಿಗಳ ದಂಡೇ ಇಲ್ಲಿ ಸೃಷ್ಟಿಯಾಗಿದೆ. ಕಸದ ನಡುವೆ ಆಹಾರದ ಎಳೆದಾಟದಲ್ಲಿ ಬೀದಿನಾಯಿಗಳ ಬೈಕ್ ಸವಾರರಿಗೆ ಅಡ್ಡ ಬಂದು ಅಪಘಾತಕ್ಕೆ ಕಾರಣವಾದ ಘಟನೆಗಳು ಇವೆ.
ವ್ಯಾಪಕವಾಗಿ ಕಸ ಎಸೆಯುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಇದೆ. ಒಣ ಕಸವನ್ನು ಎಸೆಯುವುದರಿಂದ ಅದು ಗಾಳಿಯಲ್ಲಿ ಸುತ್ತ ಹರಡುತ್ತಿದೆ. ಬೇಸಿಗೆಯ ಸಮಯದಲ್ಲಿ ಕಾಡ್ಗಿಚ್ಚು ಹರಡಲು ಕೂಡಾ ಈ ಕಸಗಳು ಕಾರಣವಾಗುತ್ತದೆ. ಪ್ರತೀ ವರ್ಷವೂ ಇಲ್ಲಿ ವ್ಯಾಪಕ ಕಾಡ್ಗಿಚ್ಚು ಕಾಣಿಸಿಕೊಂಡು ಅಮೂಲ್ಯವಾದ ಗೇರುತೋಪು ನಾಶವಾಗುತ್ತಿದೆ.
ಇಲ್ಲಿ ನಿರ್ಜನ ಪ್ರದೇಶವಾದ್ದರಿಂದ ಹಗಲು ವೇಳೆಯಲ್ಲಿಯೇ ಕಸ ಎಸೆದು ಹೋಗುತ್ತಾರೆ. ರಾತ್ರಿ ವೇಳೆ ಅವ್ಯಾಹತವಾಗಿ ಕಸವನ್ನು ಎಸೆಯಲಾಗುತ್ತದೆ. ಕಸ ಎಸೆಯುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಕೈಗೊಂಡರೆ ಇಂತಹ ಕೀಡಿಗೇಡಿ ಕೃತ್ಯಗಳಿಗೆ ವಿರಾಮ ದೊರಕಿದಂತಾಗುತ್ತದೆ. ಕಸ ಎಸೆಯುವ ದುಷ್ಕರ್ಮಿಗಳನ್ನು ಖುದ್ದಾಗಿ ಹಿಡಿದು ಕ್ರಮ ಜರಗಿಸಿದರೆ ಮತ್ತೂಳಿದವರಿಗೆ ಭಯ ಉಂಟಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಕೇವಲ ಫಲಕಗಳನ್ನು ಅಳವಡಿಸಿ ಅದರಲ್ಲಿ ಕ್ರಮ ಜರುಗಿಸುತ್ತೇವೆ ಎಂದು ಉಲ್ಲೇಖಿಸಿದರೆ ಸಾಲದು ಕ್ರಮ ಜರುಗಿಸಿ ಇಂಥಹ ವಿಕೃತಿಗಳಿಗೆ ತಡೆ ಹಾಕುವ ಕಾರ್ಯ ಆಗಬೇಕಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಇವತ್ತು ಎಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಎಸ್.ಎಲ್.ಆರ್,ಎಂ ಮೂಲಕ ಮನೆ ಅಂಗಡಿಗಳಿಂದ ಕಸವನ್ನು ಸಂಗ್ರಹಣೆ ಮಾಡಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಆದರೂ ಕೂಡಾ ಇಲ್ಲಿ ಕಸ ಎಸೆಯುವುದು ನೋಡಿದರೆ ಹೊರ ಭಾಗದವರು ಕೂಡಾ ಇಲ್ಲಿ ಕಸವನ್ನು ತಂದು ಎಸೆದು ಹೋಗುತ್ತಾರೆ ಎನ್ನಲಾಗುತ್ತಿದೆ.