ಮಂಗಳೂರು,ಜು1 (DaijiworldNews/MS): ನಾಗರೀಕರೆಲ್ಲರೂ ಬ್ಯಾಂಕ್ ಖಾತೆಗಳನ್ನು ತೆರೆಯಬೇಕೆನ್ನುವ ಉದ್ದೇಶದಿಂದ ಜಾರಿಗೊಳಿಸಲಾದ ಜನಧನ್ ಯೋಜನೆಯಡಿ ಆಯಾ ಬ್ಯಾಂಕ್ ಶಾಖೆಗಳಿಗೆ ನಿಗದಿ ಪಡಿಸಲಾದ ಗುರಿಯನ್ನು ನಿಗದಿತ ಕಾಲಮಿತಿಯಲ್ಲಿಯೇ ಸಾಧಿಸಬೇಕು ಎಂದು ಜಿಲ್ಲಾ ಪಂಚಾಯತ್ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಅವರು ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅವರು ಜೂ.30ರ ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಸಮಾಲೋಚನಾ ಸಮಿತಿ(ಡಿಸಿಸಿ) ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ(ಡಿಎಲ್ಆರ್ಸಿ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತ್ಯಂತ ಕಡಿಮೆ ಪ್ರೀಮಿಯಂ ಮೊತ್ತದ ಸುರಕ್ಷಾ, ಜೀವನ್ ಜ್ಯೋತಿ ಮೊದಲಾದ ವಿಮಾ ಯೋಜನೆಗಳಿಗೆ ಸಂಬಂಧಿಸಿ ಆಯಾ ಶಾಖೆಗಳಿಗೆ ನಿಗದಿಪಡಿಸಿದ ಗುರಿಯನ್ನು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದ ಅವರು, ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪುವಲ್ಲಿ ಪ್ರತಿಯೊಬ್ಬರು ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಅತೀ ಅಗತ್ಯವಾಗಿದ್ದು, ಸಾಮಾಜಿಕ ಕಳಕಳಿಯ ಯೋಜನೆಗಳ ಬಗ್ಗೆ ಬ್ಯಾಂಕ್ಗಳು ಹೆಚ್ಚಿನ ಗಮನ ಹರಿಸಬೇಕು. ಸರ್ಕಾರದಿಂದ ದೊರೆಯುವ ಸಬ್ಸಿಡಿ ಸಹಿತ ಸಾಲ, ಬಡ್ಡಿ ರಹಿತ ಅಥವಾ ಕಡಿಮೆ ಬಡ್ಡಿಯ ಸಹಾಯಧನ ಕ್ಲಪ್ತ ಸಮಯದಲ್ಲಿ ಫಲಾನುಭವಿಗಳಿಗೆ ದೊರೆಯುವಂತಾಗಬೇಕು. ಅರ್ಜಿ ಹಾಕಿ ಬ್ಯಾಂಕ್ಗಳಿಗೆ ಅಲೆಯುವಂತೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದರು.
2022-23ರಲ್ಲಿ 1,05,025.31 ಕೋಟಿ ರೂ. ವ್ಯವಹಾರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2022-23ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್ಗಳ ಒಟ್ಟು ವ್ಯವಹಾರ 105025.31 ಕೋಟಿರೂ. ಆಗಿದೆ. ಜಿಲ್ಲೆಯಲ್ಲಿ ಒಟ್ಟು 638 ಬ್ಯಾಂಕ್ ಶಾಖೆಗಳಿದ್ದು, ಒಟ್ಟು ಠೇವಣಿ ಮೊತ್ತ 63,310 ಕೋಟಿ ರೂ.ಗಳಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ. 9.96ರಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಶೆಟ್ಟಿ ಸಭೆಯಲ್ಲಿ ಮಾಹಿತಿ ನೀಡಿದರು.
ಈ ಅವಧಿಯಲ್ಲಿ ಆದ್ಯತಾ ಹಾಗೂ ಆದ್ಯೇತರ ವಲಯಗಳಲ್ಲಿ ಒಟ್ಟು 39,991.39 ಕೋಟಿ ರೂ. ಸಾಲ ವಿತರಿಸಲಾಗಿದ್ದು, 21,023 ಕೋಟಿ ರೂ.ಗಳ ವಾರ್ಷಿಕ ಗುರಿಯನ್ನು ಮೀರಿ ಸಾಧನೆ ಮಾಡಲಾಗಿದೆ. ಕೃಷಿ ಕ್ಷೇತ್ರಕ್ಕೆ ನಿಗದಿ ಪಡಿಸಲಾಗಿದ್ದ ವಾರ್ಷಿಕ ಗುರಿಯಾದ 6,651.10 ಕೋಟಿ ರೂ.ಗೆ ಬದಲಾಗಿ 10,057.42 ಕೋಟಿ ರೂ. ಸಾಲ ವಿತರಿಸಲಾಗಿದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಯಡಿ 5209.84 ಕೋಟಿರೂ. ಸಾಲ ವಿತರಣೆಯಾಗಿದ್ದು, ಶೇ. 99.91ರಷ್ಟು ನಿಗದಿತ ಗುರಿಯನ್ನು ಸಾಧಿಸಲಾಗಿದೆ. ಮುದ್ರಾ ಯೋಜನೆಯಡಿ 33173 ಖಾತೆಗಳಲ್ಲಿ 596.19 ಕೋಟಿ ರೂ. ಸಾಲ ವಿತರಿಸಲಾಗಿದೆ. ಅಟಲ್ ಪಿಂಚಣಿ ಯೋಜನೆಯಡಿ ಒಟ್ಟು 145288 ಖಾತೆಗಳನ್ನು ತೆರೆಯಲಾಗಿದೆ ಎಂದು ಅವರು ವಿವರಿಸಿದರು.
10 ರೂ. ನಾಣ್ಯಗಳು ನಕಲಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅವುಗಳ ಚಲಾವಣೆಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಆರ್ಬಿಐ ಮ್ಯಾನೇಜರ್ ತನು ನಂಜಪ್ಪ ಬ್ಯಾಂಕ್ಗಳಿಗೆ ಕರೆ ನೀಡಿದರು.
ಸಭೆಯಲ್ಲಿ ನಬಾರ್ಡ್ ಡಿಡಿಎಂ ಸಂಗೀತ ಕರ್ತಾ, ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್ನ ಜನರಲ್ ಮ್ಯಾನೇಜರ್ ಸುಧಾಕರ ಕೊಟ್ಟಾರಿ ಉಪಸ್ಥಿತರಿದ್ದರು.
ವಿವಿಧ ಬ್ಯಾಂಕುಗಳ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.