ಬಂಟ್ವಾಳ, ಜೂ 30 (DaijiworldNews/SM): ಮನೆಯೊಂದು ಕುಸಿದು ಬೀಳುವ ಹಂತದವರೆಗೆ ಮಣ್ಣು ಅಗೆತ ಮಾಡಿ ಅಮಾನವೀಯತೆ ಮೆರೆದ ವ್ಯಕ್ತಿಗಳು, ಕಳೆದ ಒಂದು ವರ್ಷದಿಂದ ಈ ಘಟನೆಯ ಬಗ್ಗೆ ನೀಡಿದ ದೂರಿಗೆ ಸ್ಪಂದನೆ ನೀಡದೆ ಮೌನವಹಿಸಿದ ಗ್ರಾ.ಪಂ.ವಿರುದ್ಧ ಸಂಶಯ ವ್ಯಕ್ತವಾಗಿದೆ ಎಂಬ ಆರೋಪಗಳು ಕೇಳಿಬಂದಿದೆ.
ಬಂಟ್ವಾಳ ತಾಲೂಕಿನ ಮಾಣಿ ಗ್ರಾಮಪಂಚಾಯತ್ ವ್ಯಾಪ್ತಿಯ ಕೊಡಾಜೆ ಎಂಬಲ್ಲಿರುವ ವಿಶ್ವನಾಥ ಎಂಬವರ ಮನೆ ಜರಿದು ಬೀಳುವ ಸ್ಥಿತಿಯಲ್ಲಿದೆ. ಕಳೆದ ಒಂದು ವರ್ಷದ ಹಿಂದೆ ವಿಶ್ವನಾಥ ಅವರ ಮನೆಯ ಕೆಳಗಿನ ಭಾಗದ ಜಾಗವನ್ನು ಕ್ರಯಕ್ಕೆ ಪಡೆದ ವ್ಯಕ್ತಿಯೊರ್ವ ಮನೆಯಲ್ಲಿ ಯಾರು ಇಲ್ಲದ ವೇಳೆ ಜೆಸಿಬಿ ಬಳಸಿ ಮನೆಯ ಪಂಚಾಂಗದವರೆಗೆ ಅಗೆದು ತೆಗೆದಿದ್ದಾರೆ.
ಇವರು ಮಣ್ಣು ತೆಗೆದ ಪರಿಣಾಮವಾಗಿ ಮನೆಗೆ ಹಾನಿಯಾಗುವ ಸಂಭವ ಹೆಚ್ಚು ಜೊತೆಗೆ ಮನೆ ಬಿದ್ದು ಪ್ರಾಣ ಹಾನಿಯಾಗುವ ಸಂಭವವು ಇದೆ ,ಹೀಗಾಗಿ ನಿಯಮ ಬಾಹಿರವಾಗಿ ಕಾನೂನು ಪ್ರಕಾರ ಮಣ್ಣು ತೆಗೆಯದ ವ್ಯಕ್ತಿಯ ಬಗ್ಗೆ ಕ್ರಮ ಕೈಗೊಂಡು ತಡೆಗೊಡೆ ನಿರ್ಮಿಸಿಕೊಡುವಂತೆ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಲಾಗಿತ್ತು.
ಮನವಿಗೆ ಸ್ಪಂದಿಸಿದ ಗ್ರಾಮಪಂಚಾಯತ್ ಬಳಿಕ ಮಳೆಗಾಲದಲ್ಲಿ ಮನೆ ಬೀಳುವ ಮತ್ತು ಅಪಾಯದಲ್ಲಿರುವುದರಿಂದ ಮಳೆ ಕಡಿಮೆಯಾಗುವ ವರೆಗೆ ಮನೆಯಲ್ಲಿ ವಾಸ್ತವ್ಯ ಮಾಡಬೇಡಿ, ಮಳೆ ಕಡಿಮೆಯಾದ ಕೂಡಲೇ ತಡೆಗೋಡೆ ನಿರ್ಮಿಸಿಕೊಡುವ ಬಗ್ಗೆ ಸೂಕ್ತವಾದ ಕ್ರಮಕೈಗೊಳ್ಳುವ ಬಗ್ಗೆ ನೋಟಿಸ್ ನೀಡಿತ್ತು.
ಆದರೆ ಮಳೆ ಕಡಿಮೆಯಾದರೂ ಯಾವುದೇ ಕ್ರಮ ಕೈಗೊಳ್ಳದ ಪಂಚಾಯತ್ ವಿರುದ್ದ ಬಂಟ್ವಾಳ ತಹಶಿಲ್ದಾರ್ ಹಾಗೂ ತಾ.ಪಂ.ಇ.ಒ.ಅವರಿಗೆ ದೂರು ನೀಡಲಾಗಿತ್ತು.
ಈ ಬಗ್ಗೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಗ್ರಾ.ಪಂ.ಗೆ ಅಧಿಕಾರಿಗಳು ನೋಟಿಸ್ ನೀಡಿದ್ದರು.
ಬಳಿಕ ಶಾಸಕರ ನೇತೃತ್ವದಲ್ಲಿ ನಡೆದ ಗ್ರಾಮಸ್ಪಂದನ ಕಾರ್ಯಕ್ರಮದಲ್ಲಿ ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಲ್ಲದೆ ದೂರು ನೀಡಲಾಗಿತ್ತು.
ದೂರಿನ ಬಗ್ಗೆ ಶಾಸಕರು ಕೇಳಿದಾಗ ಒಂದು ತಿಂಗಳೊಳಗೆ ತಡೆಗೋಡೆಗೆ ವ್ಯವಸ್ಥೆ ಮಾಡುತ್ತೇನೆ ಎಂದು ಪಿ.ಡಿ.ಒ ಭರವಸೆ ನೀಡಿದ್ದರು. ಆದರೆ ಗ್ರಾ.ಪಂ.ಪಿ.ಡಿ.ಒ.ಅದೇ ದಾರಿಯನ್ನು ಹಿಡಿದು ಯಾವುದೇ ಸ್ಪಂದನೆ ನೀಡಿಲ್ಲ...
ಇದೀಗ ಮತ್ತೆ ಮಳೆ ಜೋರಾಗಿ ಸುರಿಯಲು ಪ್ರಾರಂಭಿಸಿ ಅಲ್ಲಲ್ಲಿ ಮಣ್ಣುಗುಡ್ಡ ಜರಿತ ಪ್ರಾರಂಭವಾದಂತೆ ಎಚ್ಚೆತ್ತುಕೊಂಡ ಪಂಚಾಯತ್ ಮತ್ತು ಪಿಡಿಒ ಮತ್ತೆ ಒಂದು ನೋಟೀಸ್ ನೀಡಿದೆ.
ಅದರಲ್ಲಿ ಮಳೆಗಾಲದಲ್ಲಿ ಅಥವಾ ಬೇರೆ ಸಂದರ್ಭದಲ್ಲಿ ಕುಸಿತ ಉಂಟಾಗಿ ಅಪಾಯ ಸಂಭವಿಸಿದರೆ ನಾವು ಜವಾಬ್ದಾರಲ್ಲ ಎಂದು ಬರೆದು ನೋಟಿಸ್ ನೀಡಿದ್ದಾರೆ.
ಒಮ್ಮೆ ತಡೆಗೋಡೆ ಕಟ್ಟಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ನೋಟಿಸ್ ನೀಡಿದ ಅದೇ ಪಂಚಾಯತ್ ಮತ್ತು ಅದೇ ಪಿ.ಡಿ.ಒ.ಮತ್ತೆ ನಾವು ಜವಬ್ದಾರರಲ್ಲ ಎಂಬ ನಾಟಕೀಯ ಮಾತನ್ನು ನೀಡಿದೆ .
ಹಾಗಾದರೆ ಇವರ ನೋಟಿಸ್ ಗೆ ಬೆಲೆ ಇಲ್ಲವೆ ಎಂದು ದೂರಿದ ಮನೆಯವರು ಇದರ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.ಅಲ್ಲದೆ ಮಳೆ ಗಾಲದಲ್ಲಿ ಯಾವುದೇ ಪ್ರಾಣಹಾನಿಯಾದರೂ ಪಂಚಾಯತ್ ನೇರ ಹೊಣೆ ಯಾಗುತ್ತದೆ ಎಂದು ಅವರು ಮಾಧ್ಯಮದ ಮೂಲಕ ತಿಳಿಸಿದ್ದಾರೆ.