ಮಂಗಳೂರು,ಏ 02 (MSP): ಕಡಲನಗರಿ ಮಂಗಳೂರಿನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಶಿಸ್ತು ತರಲು ಪ್ರಯತ್ನಿಸುತ್ತಿರುವ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರು ಸಂಚಾರ ನಿಯಮಗಳ ಉಲ್ಲಂಘನೆ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.
ಕೇವಲ ನಾಲ್ಕು ದಿನದ ಅವಧಿಯಲ್ಲಿ ನಗರದಲ್ಲಿ ಮದ್ಯ ಸೇವನೆ ಮಾಡಿ ವಾಹನ ಸಂಚಾರ ಚಲಾಯಿಸಿದ 272 ಪ್ರಕರಣಗಳನ್ನು ಸಂಚಾರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಝೀಬ್ರಾ ಕ್ರಾಸಿಂಗ್ ಮೇಲೆ ವಾಹನಗಳನ್ನು ನಿಲ್ಲಿಸಿ ಪಾದಚಾರಿಗಳ ಸಂಚಾರ ಅಡ್ಡಿಪಡಿಸಿದ 422 ಕೇಸುಗಳನ್ನು ದಾಖಲಿಸಲಾಗಿದೆ.
ಬಸ್ ಗಳ ಕರ್ಕಶ ಹಾರ್ನ್ ವಿರುದ್ದ 144 ಪ್ರಕರಣ, ಟಿಂಟ್ ಗ್ಲಾಸ್ ಕುರಿತಂತೆ 186 ಕೇಸುಗಳು ದಾಖಲಾಗಿವೆ. ನೋ ಪಾರ್ಕೀಂಗ್ ಜಾಗದಲ್ಲಿ ವಾಹನ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ಆರೋಪದ ಮೇಲೆ 212 ವಾಹನಗಳನ್ನು ಟೋಯಿಂಗ್ ಮಾಡಲಾಗಿದೆ. ಟರ್ಪಾಲು ಹಾಕದೆ ಲಾರಿ/ಟೆಂಪೋಗಳಲ್ಲಿ ಮರಳು, ಮಣ್ಣು ಕಲ್ಲು ಇತ್ಯಾದಿ ಸಾಗಾಟ ಮಾಡಿದ ಬಗ್ಗೆ ನಾಲ್ಕು ದಿನಗಳಲ್ಲಿ 94 ಕೇಸು ದಾಖಲಿಸಲಾಗಿದೆ. ಮಿತಿ ಮೀರಿದ ವೇಗದಲ್ಲಿ ಹಾಗೂ ಅಜಾಗ್ರತೆಯಿಂದ ವಾಹನ ಚಲಾಯಿಸಿದ ಬಗ್ಗೆ 212 ಪ್ರಕರಣಗಳನ್ನು ದಾಖಲಿಸಲಾಗಿದೆ.
ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿ ಎಂಬುವುದಾಗಿ ಕಮಿಷನರ್ ಸಂದೀಪ್ ಪಾಟೀಲ್ ಟ್ವೀಟ್ ಮಾಡಿದ್ದಾರೆ.