ಕುಂದಾಪುರ, ಜೂ 30(DaijiworldNews/MS): ನಮ್ಮ ನಿರೀಕ್ಷೆಯಂತೆ ಬಿಜೆಪಿ ಈ ಬಾರಿ ಕರ್ನಾಟಕದಲ್ಲಿ ಗೆಲುವು ಸಾಧಿಸಬೇಕಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ಸೋಲಿನ ಶಿಶು ಅನಾಥ ಎಂಬಂತೆ ಕೆಲವು ಗೊಂದಲಗಳಾಗಿದ್ದು ಸತ್ಯ. ಆದರೆ ಈ ಬಗ್ಗೆ ಎದೆಗುಂದದೆ ಪಕ್ಷವನ್ನು ಮತ್ತೆ ಸಂಘಟಿಸುತ್ತೇವೆ. ಕಾರ್ಯಕರ್ತರು ಯಾರೂ ಎದೆಗುಂದಬೇಕಿಲ್ಲ ಎಂದು ವಿಧಾನಪರಿಷತ್ ಸದಸ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರದ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಕುಂದಾಪುರ ಶಾಸಕರ ಕಚೇರಿ ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾಧ್ಯಮದ ಜೊತೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡುವುದು ಆಡಳಿತ ಪಕ್ಷದ ಆದೇಶ ಪಾಲನೆಗೆ ಅಲ್ಲ. ಬದಲಾಗಿ ಆಡಳಿತ ಪಕ್ಷದ ಜನವಿರೋಧಿ ಧೊರಣೆಗಳನ್ನು ವಿರೋಧಿಸುವುದಕ್ಕೆ ವಿರೋಧ ಪಕ್ಷವೇ ಆಯ್ಕೆ ಮಾಡುತ್ತದೆ. ಅಧಿವೇಶನದ ದಿನ ವಿರೋಧಪಕ್ಷದ ನಾಯಕನನ್ನು ಘೋಷಣೆ ಮಾಡುತ್ತದೆ. ಆ ಬಗ್ಗೆ ಆಡಳಿತ ಪಕ್ಷ ಚಿಂತಿಸಬೇಕಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರವು ಇಡೀ ದೇಶಕ್ಕೆ 549 ಲಕ್ಷ ಕ್ವಿಂಟಾಲ್ ಅಕ್ಕಿಯನ್ನು ಉಚಿತವಾಗಿ ಪೂರೈಸುತ್ತಿದೆ. ಅದರಂತೆ ಕರ್ನಾಟಕಕ್ಕೂ ಪ್ರತೀ ತಿಂಗಳು 22 ½ ಲಕ್ಷ ಕ್ವಿಂಟಾಲ್ ಅಕ್ಕಿ ನೀಡುತ್ತಿದೆ. ತಮಿಳುನಾಡಿಗೆ 34 ಲಕ್ಷ ಕ್ವಿಂಟಾಲ್, ಕೇರಳಕ್ಕೆ 14 ಲಕ್ಷ ಕ್ವಿಂಟಾಲ್ ಅಕ್ಕಿ ನೀಡುತ್ತಿದೆ. ಬೇರೆಲ್ಲಾ ರಾಜ್ಯಗಳೂ ಕೇಂದ್ರ ನೀಡಿದ ಅಕ್ಕಿಯನ್ನು ಕೇಂದ್ರವೇ ನೀಡಿದೆ ಎನ್ನುತ್ತಾರೆ. ಆದರೆ ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಮಾತ್ರ ಕೇಂದ್ರ ಅಕ್ಕಿ ನೀಡುತ್ತಿಲ್ಲ ಎನ್ನುತ್ತಿದ್ದಾರೆ. ಅಲ್ಲದೇ 5 ಕೆಜಿ.ಅಕ್ಕಿ ಕೊಡುತ್ತೇವೆ. ಉಳಿದ 5 ಕೆಜಿಗೆ ಹಣ ನೀಡುತ್ತೇವೆ ಎನ್ನುತ್ತಿರುವ ರಾಜ್ಯ ಸರ್ಕಾರದ್ದು 50% ಗ್ಯಾರೆಂಟಿಯಾ ಎಂದು ಪ್ರಶ್ನಿಸಿದ್ದಾರೆ.