ಬಂಟ್ವಾಳ, ಜೂ 30(DaijiworldNews/MS): ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಹಲವೆಡೆಗಳಲ್ಲಿ ಹಾನಿ ಸಂಭವಿಸಿದೆ. ವೀರಕಂಭ ಗ್ರಾಮದ ಗುಡ್ಡ ತೋಟ ಖಾನ ಎಂಬಲ್ಲಿ ರೇವತಿ ಎಂಬವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿರುತ್ತದೆ. ಬಂಟ್ವಾಳ ಕಸಬಾ ಗ್ರಾಮದ ಅರಬ್ಬಿ ಗುಡ್ಡೆ ಮನೆ ನಿವಾಸಿ ಜಯ ಕುಲಾಲ್ ಬಿನ್ ಈಶ್ವರ ಮೂಲ್ಯ ಅವರ ವಾಸ್ತವ್ಯದ ಮನೆಗೆ ಇಂದು ಮುಂಜಾನೆ ತೆಂಗಿನ ಮರ ಬಿದ್ದು ಮನೆಗೆ ಭಾಗಶಃ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ.
ಬಂಟ್ವಾಳ ಬಿ.ಸಿ.ರೋಡಿನ ಅಜ್ಜಿಬೆಟ್ಟು ಎಂಬಲ್ಲಿ ಮನೆಯೊಂದರ ಸಮೀಪ ಮಣ್ಣು ಜರಿದು ಮನೆಗೆ ಅಪಾಯವಾಗುವ ಸಂಭವ ಇರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ರವಿರಾಜ್ ಆಳ್ವ ಅವರ ಮನೆಗೆ ಇಲಾಖೆ ಸಿಬಂದಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಂಬಂಧಿಕರ ಮನೆಗೆ ತೆರಳಿವಂತೆ ಸೂಚಿಸಲಾಗಿದೆ. ವಿಟ್ಲ ಕಸಬಾ ಗ್ರಾಮದ ಉಕ್ಕುಡ, ಕಲ್ಲುರ್ಟಿಯಡ್ಕ ಗೌರಿ ಯಾನೆ ಸರೋಜ ಮನೆ ಛಾವಣಿ ಭಾಗಶಃ ಹಾನಿಯಾಗಿದೆ.
ತಾಲೂಕು ಕಚೇರಿಯಿಂದ ಕಂಟ್ರೋಲ್ ರೂಂ
ಬಂಟ್ವಾಳ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಿಂದ ಹಲವೆಡೆ ಹಾನಿಗಳು ಸಂಭವಿಸಿವೆ. ಈಗಾಗಲೇ ತಾಲೂಕು ಕಚೇರಿಯಿಂದ ಪ್ರಕೃತಿ ವಿಕೋಪಗಳು ಎದುರಾದಾಗ ಸಂಪರ್ಕಿಸಲು ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಪಾಯಗಳ ವಿವರವನ್ನು ನೀಡಬಹುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ ಹೀಗಿದೆ. 08255230202 ಮತ್ತು ಮೊಬೈಲ್ ಸಂಖ್ಯೆ 9632219920. ಪ್ರಾಕೃತಿಕ ವಿಕೋಪದಡಿಯಲ್ಲಿ ಸಂಭವಿಸಬಹುದಾದ ಹಾನಿಗಳ ನಿರ್ವಹಣೆಗೆ ಸಂಬಂಧಿಸಿ ಈ ಕಂಟ್ರೋಲ್ ರೂಮ್ ಕಾರ್ಯಾಚರಿಸುತ್ತದೆ ಎಂದು ತಹಸೀಲ್ದಾರ್ ಎಸ್.ಬಿ.ಕೂಡಲಗಿ ತಿಳಿಸಿದ್ದಾರೆ.