ಕುಂದಾಪುರ, ಜೂ 30 (DaijiworldNews/MS): ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರು ಸಂಚರಿಸುತ್ತಿದ್ದ ವೇಳೆ ರಸ್ತೆಗಡ್ಡವಾಗಿ ಬಿದ್ದ ಮರವನ್ನು ಸ್ವತಃ ಶ್ರಮದಾನದಿಂದ ಸಂಗಡಿಗರ ಜೊತೆ ಸೇರಿ ತೆರವು ಮಾಡುತ್ತಿರುವ ವೇಳೆ ಮತ್ತೊಂದು ಮರ ಬಿದ್ದ ಘಟನೆ ಕುಂದಾಪುರದ ಹಾಲಾಡಿ ರಸ್ತೆಯಲ್ಲಿ ನಡೆದಿದೆ. ಆದರೆ ಇನ್ನೊಂದು ಮರ ಬೀಳುತ್ತಿರುವ ಶಬ್ಧ ಕೇಳಿದೊಡನೇ ಅಲ್ಲಿಂದ ತಪ್ಪಿಸಿಕೊಂಡ ಪರಿಣಾಮ ಶಾಸಕ ಗುರುರಾಜ್ ಸಹಿತ ಎಲ್ಲರೂ ಬಚಾವ್ ಆಗಿದ್ದಾರೆ.
ಗುರುವಾರ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಲಾಡಿ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಇದೇ ವೇಳೆ ಮಾರ್ಗದ ಬದಿಯಲ್ಲಿದ್ದ ಅಕೇಶಿಯಾ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದಿತ್ತು. ತಕ್ಷಣ ಶಾಸಕ ಗುರುರಾಜ್ ಸಹಿತ ಯುವಕರ ಪಡೆ ಮರವನ್ನು ರಸ್ತೆಯಿಂದ ತೆರವು ಮಾಡಿದ್ದಾರೆ. ಮರ ತೆರವು ಮಾಡಿದ ತಕ್ಷಣ ಇನ್ನೊಂದು ಮರ ಬುಡ ಕಳಚಿ ಬೀಳಲಾರಂಭಿಸಿದೆ. ಆಗ ಶಬ್ಧ ಕೇಳಿದ ತಕ್ಷಣ ಅಲ್ಲಿದ್ದ ಎಲ್ಲರೂ ಓಡಿ ತಪ್ಪಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಕರಾವಳಿಯ ಭಾಗದಲ್ಲಿ ತೀವ್ರತರದ ಮಳೆ ಬೀಳಲಾರಂಭಿಸಿದೆ. ಮರಗಳೂ ಧರಾಶಾಹಿಯಾಗುತ್ತಿವೆ.