ಮಂಗಳೂರು, ಜೂ 29 (DaijiworldNews/SM): ಪದವೀಧರರಾಗಿ ರಾಜಕೀಯದಲ್ಲಿ ಆಸಕ್ತರಿರುವವರಿಗೆ ತರಬೇತಿ ನೀಡಲು ತರಬೇತಿ ಸಂಸ್ಥೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕೀಯದ ಬಗ್ಗೆ ಆಸಕ್ತ ಪದವೀಧರರಿಗೆ ತರಬೇತಿ ಪಡೆಯಲು ರಾಜ್ಯದಲ್ಲಿ ಪೊಲಿಟಿಕಲ್ ಸೆಂಟರ್ನ ಕೊರತೆಯಿದೆ. ಆದ್ದರಿಂದ ಈ ಕೊರತೆ ನೀಗಿಸಲು ತರಬೇತಿ ಸಂಸ್ಥೆಯೊಂದನ್ನು ಸ್ಥಾಪಿಸುವ ಚಿಂತನೆಯಿದೆ. ಪದವೀಧರರಿಗೆ ಒಂದು ವರ್ಷದ ಕೋರ್ಸ್ ಇದಾಗಿದ್ದು, ಆರು ತಿಂಗಳು ಪ್ರ್ಯಾಕ್ಟಿಕಲ್ ತರಗತಿಯಿದ್ದರೆ, ಇನ್ನಾರು ತಿಂಗಳು ಇಂಟರ್ ಶಿಪ್ ಇರುತ್ತದೆ. ಅದಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಲು ಚರ್ಚೆ ನಡೆದಿದ್ದು, ಒಂದು ಹಂತಕ್ಕೆ ಬಂದಿದೆ. ಸರಕಾರದೊಂದಿಗೆ, ವಿಧಾನಸಭಾ ಸಭಾಧ್ಯಕ್ಷರೊಂದಿಗೆ ಮಾತನಾಡಿಕೊಂಡು ಈ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ದೇಶದ ಪುಣೆಯಲ್ಲಿ ಇಂತಹ ರಾಜಕೀಯ ತರಬೇತಿ ನೀಡುವ ಸಂಸ್ಥೆಯೊಂದು ಇದೆ. ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ಸಿಲೆಬಸ್ ಅನ್ನು ಮಾಡಲಾಗುತ್ತದೆ. ತರಬೇತಿ ಪಡೆದವರೆಲ್ಲಾ ರಾಜಕೀಯ ಪ್ರವೇಶಿಸಬೇಕು ಎಂದಲ್ಲ. ಅವರು ಎನ್ಜಿಒ ಕೂಡಾ ಆರಂಭಿಸಬಹುದು. ಸರಕಾರದ ಸಂಸ್ಥೆಗಳಲ್ಲೂ ಅವರಿಗೆ ಅವಕಾಶ ಇರಲಿದೆ. ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ ಎಂದು ಹೇಳಿದರು.