ಪಡುಬಿದ್ರಿ, ಏ 02 (MSP): ಕಾಪು ತಾಲೂಕಿನ ಬಡಾ ಗ್ರಾಮ ಉಚ್ಚಿಲದಲ್ಲಿರುವ ಖಾಸಗಿ ಹೋಟೆಲ್ ಪಾರ್ಟಿ ಹಾಲ್ನಲ್ಲಿ ಏ.1ರ ಸೋಮವಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷವೂ ಚುನಾವಣೆ ಇಲಾಖೆಯ ಅನುಮತಿ ಪಡೆದು ಸಭೆ ಆಯೋಜಿಸಿತ್ತು. ಆದರೆ ಈ ಸಭೆಯಲ್ಲಿ ಇಲಾಖೆ ಅನುಮತಿ ಪಡೆಯದೆ ಲೆಮನ್ ಜ್ಯೂಸ್ ಹಂಚಿದ್ದಕ್ಕೆ ಈಗ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಕೇಸು ದಾಖಲಾಗಿದೆ.
ದೋಸ್ತಿ ಪಕ್ಷದ ಆಯೋಜಸಿದ ಸಭೆಯಲ್ಲಿ ಸೋಮವಾರ ಮದ್ಯಾಹ್ನ 1.55 ಕ್ಕೆ ಕಾಪು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಎಂಬವರು ಸಭೆಯಲ್ಲಿ ಭಾಗವಹಿಸಿದ 70 ಜನರಿಗೆ ಕುಡಿಯಲೆಂದು ಲೆಮನ್ ಜ್ಯೂಸ್ ನೀಡಿದ್ದಾರೆ. ಆದರೆ ಸಭೆಗೆ ಅನುಮತಿ ಪಡೆದವರು ಜ್ಯೂಸ್ ವಿತರಿಸಲು ಅನುಮತಿ ಪಡೆದಿರಲಿಲ್ಲ. ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಇಲಾಖೆ ಅನುಮತಿ ಪಡೆಯದೆ ಜ್ಯೂಸ್ ವಿತರಿಸುವಂತಿಲ್ಲ ಎಂದು ನವೀನ್ ಚಂದ್ರ ವಿರುದ್ದ ಕೇಸ್ ಜಡಿದಿದೆ.
ಜ್ಯೂಸ್ ನ ಮಾದರಿ ಹಾಗೂ ವಿಡಿಯೋ ಚಿತ್ರೀಕರಣದ ಸಿಡಿ ಸಂಗ್ರಹಿಸಿ ವರದಿಯೊಂದಿಗೆ, ಅಲೆವೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ 3 ನೇ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿಯಾಗಿರುವ ದಯಾನಂದ ಬೆಣ್ಣೂರ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.