ಕುಂದಾಪುರ ನ 7: ಪ್ರತಿಯೋರ್ವನಿಗೂ ಜೀವನದಲ್ಲಿ ಛಲ ಎನ್ನುವುದಿರುತ್ತದೆ. ಆದರೆ ಛಲದೊಂದಿಗೆ ಆತ್ಮ ವಿಶ್ವಾಸ ವಿದ್ದಾಗ ಮಾತ್ರ ಸಾಧನೆಗೆ ಪೂರಕವಾಗುತ್ತದೆ. ದ್ವಿತೀಯ ಪಿಯುಸಿಯಲ್ಲಿರು ವಿದ್ಯಾರ್ಥಿ ಪ್ರದೀಶ್ ಕೆ. ಸಾಕಷ್ಟು ಸಾಧನೆಯನ್ನು ಮಾಡಿದ್ದಾನೆ, ಸದ್ಯ ಪೆಂಟಿಂಗ್ನಲ್ಲಿ ಗಿನ್ನಿಸ್ ದಾಖಲೆ ಮಾಡಬೇಕು ಎನ್ನುವ ಛಲದೊಂದಿಗೆ ಆತ್ಮವಿಶ್ವಾಸದಿಂದ ಮುನ್ನುಗ್ಗಿದ್ದಾನೆ. ಪ್ರದೀಶ್ ಕಲ್ಮನೆಯಂತೆ 4 ದಿನವು ಕೂಡ ಸ್ವಚ್ಛ ಭಾರತ್ ಪರಿಕಲ್ಪನೆಯ ಚಿತ್ರಣ ಸುಲಲಿತವಾಗಿ ಹರಿದು ಬರಲಿ ಎಂದು ಕೋಟ ವಿವೇಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಮಯ್ಯ ಹೇಳಿದರು.
ಅವರು ಮಂಗಳವಾರದಂದು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಕಾಲೇಜಿನ ವಿದ್ಯಾರ್ಥಿ ಪ್ರದೀಶ್ ಕೆ. ಲಾಂಗೆಸ್ಟ್ ಡ್ರಾಯಿಂಗ್ ಬೈ ಆನ್ ಇನ್ಡಿವಿಜುವಲ್ ಹೆಸರಿನ 4 ದಿನಗಳ ಕಾಲ ನಿರಂತರವಾಗಿ ಸ್ವಚ್ಛ ಭಾರತ್ ಕಲ್ಪನೆಯಲ್ಲಿ ಸುಮಾರು ೧೦೦೦ ಮೀಟರ್ ಚಿತ್ರ ರಚಿಸುವ ಗಿನ್ನಿಸ್ ವಲ್ಡ್ ರೆಕಾರ್ಡ್ ಸಾಧನೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಇದೇ ಸಂದರ್ಭ ಉದ್ಯಮಿ ಆನಂದ ಸಿ.ಕುಂದರ್ ಮಾತನಾಡಿ, ಗಿನ್ನಿಸ್ ರೆಕಾರ್ಡ್ ಸಾಧನೆ ಎಂದರೆ ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ಪೂರ್ವ ಸಿದ್ಧತೆಗಳ ಜೊತೆಗೆ ಈ ಹಿಂದೆ ಯಾರು ಮಾಡಿರಿದ ಸಾಧನೆ ಮಾಡಬೇಕಾಗುತ್ತದೆ. ಇಂತಹ ಸಾಹಸಕ್ಕೆ ಕೈ ಹಾಕಿದ ಪ್ರದೀಶ್ ಗೆ ಜಯ ಸಿಗಲು 1000ಮೀಟರ್ ಗೂ ಅಧಿಕ ಚಿತ್ರ ರಚನೆಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚೇರ್ಕಾಡಿ ಪಂಚಾಯತ್ ಅಧ್ಯಕ್ಷ ಹರೀಶ್ ಶೆಟ್ಟಿ, ಕೋಟ ವಿವೇಕ ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಉಡುಪ, ವಿವೇಕ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕ ಶ್ರೀಪತಿ ಹೇರ್ಳೆ ಉಪಸ್ಥಿತರಿದ್ದರು. ಗಿನ್ನಿಸ್ ವಲ್ಡ್ ರೆಕಾರ್ಡ್ನ ಸಾಕ್ಷಿಗಳಾಗಿ ಪ್ರಖ್ಯಾತ ಕಲಾವಿದ ರಮೇಶ್ ರಾವ್, ಉಡುಪಿ ಪಿಡಬ್ಲ್ಯೂಡಿ ಎಇಇ ಡಿ.ವಿ.ಹೆಗ್ಡೆ, ಗಿನ್ನಿಸ್ ದಾಖಲೆಯ ಈಜುಪಟು ಗೋಪಾಲ್ ಖಾರ್ವಿ, ನೋಟರಿ ಕೆ.ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಸಭೆಯಲ್ಲಿ ಕೋಟ ವಿವೇಕ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ ಸ್ವಾಗತಿಸಿ, ಪ್ರಸ್ತಾವಿಸಿದರು. ಉಪನ್ಯಾಸಕ ಸಂಜೀವ ಜಿ. ಕಾರ್ಯಕ್ರಮ ನಿರ್ವಹಿಸಿದರು. ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗದೀಶ ಹೊಳ್ಳ ವಂದಿಸಿದರು.
ರೂಬಿಕ್ಸ್ ಕ್ಯೂಬ್ ಗಿನ್ನಿಸ್ ಸರದಾರ ಪ್ರಥ್ವೀಶ್ ಗಿನ್ನಿಸ್ ದಾಖಲೆಯ ನಿಯಮ ನಿಬಂಧನೆಗಳನ್ನು ಸಭೆಗೆ ವಿವರಿಸಿದರು. ಗಿನ್ನಿಸ್ ವಲ್ಡ್ ರೆಕಾರ್ಡ್ ಸಾಕ್ಷಿಗಳು ಪ್ರದೀಶ್ ಕೆ. ಗಿನ್ನಿಸ್ ರೆಕಾರ್ಡ್ಗೆ ಬಳಸುವ ಉಪಕರಣ ಮತ್ತು ಸಲಕರಣೆಗಳನ್ನು ಪರಿಶೀಲಿಸಿದರು. ಮೊದಲನೆಯ ದಿನದ ಅಂಗವಾಗಿ ಭವ್ಯ ಭಾರತ್ ಪರಿಕಲ್ಪನೆಯಲ್ಲಿ ಈ ಹಿಂದೆ ಇದ್ದ ಹಸಿರು ಭಾರತದ ಚಿತ್ರಣವನ್ನು ಬಣ್ಣದ ಪೆನ್ಸಿಲ್, ಕ್ರೇಯಾನ್ ಮತ್ತು ಮಾರ್ಕರ್ಗಳನ್ನು ಬಳಸಿ ಚಿತ್ರಿಸಿದರು. ಬೆಳಿಗ್ಗೆ 9 ಗಂಟೆ 27 ನಿಮಿಷಕ್ಕೆ ಚಿತ್ರ ಬಿಡಿಸಲು ಪ್ರಾರಂಭಿಸಿದ ಪ್ರದೀಶ್ ಕೆ. ನಿಗದಿತ ವಿರಾಮದ ಸಮಯದಲ್ಲಿ ಊಟ, ಉಪಹಾರ, ನೀರು ಸೇವನೆ ನಡೆಸುತ್ತಾ ನಿರಂತರವಾಗಿ ಚಿತ್ರ ರಚನೆ ನಡೆಸಿದರು. ಈ ಸಾಧನೆಯಲ್ಲಿ ಪ್ರದೀಶ್ ಭಟ್ ಅವರ ಅಜ್ಜಿ ಜಾನಕಮ್ಮ, ತಾಯಿ ಪ್ರಸನ್ನ ಪ್ರಸಾದ್, ತಂದೆ ಶ್ಯಾಮ ಪ್ರಸಾದ್ ಮತ್ತು ಅಣ್ಣ ಪ್ರಥ್ವೀಶ್ ಉಪಸ್ಥಿತರಿದ್ದು ಆತ್ಮವಿಶ್ವಾಸ ತುಂಬಿದರು.