ಉಳ್ಳಾಲ, ಜೂ 29 (DaijiworldNews/MS): ಗೇಯ್ಲ್ ಸಂಸ್ಥೆಯ ಅವೈಜ್ಞಾನಿಕ ಪೈಪ್ ಅಳವಡಿಸುವ ಕಾಮಗಾರಿಯಿಂದ ಕೃಷಿಕ ಕುಟುಂಬ ಕಳೆದ 5 ವರ್ಷಗಳಿಂದ 15 ಲಕ್ಷ ರೂ ನಷ್ಟವನ್ನು ಅನುಭವಿಸಿದೆ. ಈ ಬಾರಿಯೂ ನೆಟ್ಟ 400 ರಷ್ಟು ಅಡಿಕೆ ಗಿಡಗಳ ಸಹಿತ ಸ್ಪ್ರಿಂಕ್ಲರ್ ಮಣ್ಣುಪಾಲಾಗಿರುವ ಘಟನೆ ಇನೋಳಿಯ ಕಿಲ್ಲೂರು ಬಲಿಪ್ಪಗುರಿ ಎಂಬಲ್ಲಿ ಸಂಭವಿಸಿದೆ.
ಕೃಷಿಕ ಇನೋಳಿ ಕಿಲ್ಲೂರು ನಿವಾಸಿ ಐ.ಬಿ ಹುಸೈನ್ ಎಂಬವರಿಗೆ ಸೇರಿದ ತೋಟ ಸಂಪೂರ್ಣ ಮಣ್ಣುಪಾಲಾಗಿದೆ. ಇದರ ಜೊತೆಗೆ ಅವೈಜ್ಞಾನಿಕ ಮಣ್ಣು ಅಗೆತದಿಂದಾಗಿ ಭೂಕುಸಿತ ಆರಂಭವಾಗಿ ರಸ್ತೆಬದಿಯಲ್ಲಿರುವ ಕೋಳಿ ಫಾರಂ, ಆಡಿನ ಫಾರಂ, ಮನೆ, ಖಾಸಗಿ ಜಾಗಗಳು ಅಪಾಯದಂಚಿನಲ್ಲಿ ಸಿಲುಕಿದೆ.
2018 ರಲ್ಲಿ ಗೇಯ್ಲ್ ಸಂಸ್ಥೆ ಗ್ಯಾಸ್ ಪೈಪ್ ಲೈನ್ ಅಳವಡಿಸುವ ಸಲುವಾಗಿ ಐ.ಬಿ ಹುಸೈನ್ ಅವರಿಗೆ ಸೇರಿದ 22 ಸೆಂಟ್ಸ್ ಜಾಗವನ್ನು ರೂ.72,000 ಕ್ಕೆ ಖರೀದಿಸಿತ್ತು. ನಂತರ ನಡೆದ ಕಾಮಗಾರಿ ಎಲ್ಲವೂ ಹುಸೈನ್ ಅವರ ಒಂದು ಎಕರೆ ತೋಟದ ಸಮೀಪವೇ ಆಗಿತ್ತು. ಹಳೇಯ ಕಾಲದ ಸಾರ್ವಜನಿಕ ತೋಡನ್ನು ಮುಚ್ಚಿದ ಗೈಯ್ಲ್ ಸಂಸ್ಥೆ ಗುತ್ತಿಗೆದಾರರು, ಅಲ್ಲೇ ಪೈಪ್ ಅನ್ನು ಅಳವಡಿಸುತ್ತಾ ಕಾಮಗಾರಿ ಮುಂದುವರಿಸಿದ್ದರು. ಇದರಿಂದಾಗಿ ಅಂದು ಮಳೆಯ ಸಂದರ್ಭ ತೋಡಿನಲ್ಲಿ ಹರಿಯುವ ನೀರು ಹುಸೈನ್ ಅವರ ತೋಟದ ಮೇಲೆ ಹರಿಯಲು ಆರಂಭವಾಯಿತು. ಪರಿಣಾಮ ಅಂದು ನೆಟ್ಟಿದ್ದ ಬಾಳೆಗಿಡ, ಅಡಿಕೆತೋಟದ ಬಹುಪಾಲು ಗಿಡಗಳ ಮೇಲೆ ನೀರು ಹಾಗೂ ಮಣ್ಣಿನ ರಾಶಿ ಹರಿದುಬಂದು ಮಣ್ಣಿನಡಿ ಸಿಲುಕಿ ನಷ್ಟವುಂಟಾಯಿತು. ಈ ಕುರಿತು ಗೇಯ್ಲ್ ಸಂಸ್ಥೆ ಗುತ್ತಿಗೆದಾರರನ್ನು ಪ್ರಶ್ನಿಸಿ, ಕಾಮಗಾರಿಗೆ ವಿರೋಧಿಸಿದಾಗ ತೋಟಕ್ಕೆ ಹಾಗೂ ಪ್ರದೇಶಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಕಾಮಗಾರಿ ಮುಂದುವರಿಸುವ ವಿಶ್ವಾಸ ನೀಡಿದ್ದರು. ಆದರೆ ವಿಶ್ವಾಸ ನೀಡಿದ್ದ ಇಂಜಿನಿಯರ್ ಮಗದೊಂದು ವರ್ಷದ ಮಳೆಗಾಲದಲ್ಲಿ ಇರಲಿಲ್ಲ. 2019ರಲ್ಲಿ ಮತ್ತೆ ಉಳಿದಿದ್ದ ಅಡಿಕೆಗಿಡಗಳ ಮೇಲೆಯೇ ನೀರುಹರಿದು ಮಣ್ಣು ತುಂಬಿ ಸಾಕಷ್ಟು ನಷ್ಟ ಉಂಟಾಯಿತು. ಇದನ್ನು ಇಂಜಿನಿಯರ್ ಗಮನಕ್ಕೆ ತಂದಾಗ ಪರಿಹರಿಸುವ ವಿಶ್ವಾಸ ನೀಡಿದ್ದರು. ಆದರೆ ಅದೇ ರೀತಿಯಲ್ಲಿ ಉಳಿದ ಮೂರು ವರ್ಷಗಳು ಅದೇ ಪರಿಪಾಠ ಮುಂದುವರಿದು, ಪ್ರಶ್ನಿಸುತ್ತಿದ್ದ ಇಂಜಿನಿಯರ್ ಗಳೆಲ್ಲರೂ ಬದಲಾವಣೆ ಆಗುತ್ತಲೇ ಬಂದರು. ಐದು ವರ್ಷಗಳಲ್ಲಿ ಐವರು ಇಂಜಿನಿಯರ್ ಗ ಬದಲಾವಣೆಯಾಗಿತ್ತು. ಆದರೆ ಈ ಬಾರಿಯ ಇಂಜಿನಿಯರ್ಗೆ ಮಳೆ ಬರುವ ಹಿಂದೆಯೇ ಎಚ್ಚರಿಸಿದ್ದ ಹಿನ್ನೆಲೆಯಲ್ಲಿ ಲಕ್ಷಾಂತರ ವ್ಯಯಿಸಿ ತಡೆಗೋಡೆ ಕಾಮಗಾರಿ ಆರಂಭಿಸಿದ್ದಾರೆ. ಕಾಮಗಾರಿಯೂ ಕಳಪೆ ಮಟ್ಟದ್ದಾಗಿದ್ದು, ಅದರಿಂದ ತೋಟಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ ಅನ್ನುವುದು ಎರಡು ದಿನಗಳಿಂದ ಸುರಿದ ಮಳೆಯೇ ಸಾಕ್ಷಿಯಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಅಡಿಕೆಗಿಡಗಳು, ಸ್ಪ್ರಿಂಕ್ಲರ್, ಬಾಳೆಗಿಡ, ತೆಂಗುಗಿಡ ಸಂಪೂರ್ಣ ಮಣ್ಣಿನಡಿಯಲ್ಲಿ ಸಿಲುಕಿದೆ. ಜೊತೆಗೆ ತಡೆಗೋಡೆಗಾಗಿ ಬೇರೆ ಕಡೆಯಿಂದ ತಂದು ಮಣ್ಣು ಹಾಕಬೇಕಿದ್ದರೂ, ಸಮೀಪದ ಖಾಸಗಿ ಜಾಗದ ಗುಡ್ಡದಿಂದ ಅಗೆದ ಪರಿಣಾಮ ಸ್ಥಳೀಯ ಮನೆ, ಅಂಗಡಿ-ಮುಂಗಟ್ಟುಗಳು ಗುಡ್ಡಕುಸಿತದಿಂದ ಅಪಾಯದಂಚಿಗೆ ತಲುಪಿದೆ.
"ಕಳೆದ ಐದು ವರ್ಷಗಳಿಂದ ಕೃಷಿಗಾಗಿ ಹಾಕಿದ ಹಣದಿಂದ ಕೈಸುಟ್ಟುಕೊಳ್ಳುತ್ತಾ ಬಂದಿದ್ದೇವೆ. ಐದು ವರ್ಷಗಳಲ್ಲಿ ನಾಲ್ಕು ಇಂಜಿನಿಯರ್ ಗಳ ಬದಲಾವಣೆಯಾಗಿವೆ. ತಮಿಳು, ತೆಲುಗು ಮಾತನಾಡುವವರೇ ಇಂಜಿನಿಯರ್ ಗಳಾಗಿದ್ದು, ಅವರ ಜತೆಗಿನ ಸಂಭಾಷಣೆಯೇ ಕಷ್ಟವಿರುವಾಗ, ಸಮಸ್ಯೆಗಳನ್ನು ಆಲಿಸಲು ಅವರಿಗೆ ಆಗುತ್ತಿಲ್ಲ. ಗೇಯ್ಲ್ ಸಂಸ್ಥೆ ಕುಟುಂಬಕ್ಕೆ ನಿರಂತರ ದೌರ್ಜನ್ಯ ನಡೆಸುತ್ತಾ ಬಂದಿದೆ. ಇದೀಗ ತೋಟದ ಮೇಲ್ಭಾಗದಲ್ಲಿರುವ ಆರು ಮನೆಗಳು, ಅಂಗಡಿಗಳು ಅಪಾಯದಂಚಿಗೆ ತಲುಪಿದೆ. ನಿರಂತರ ಭೂಕುಸಿತದಿಂದ ಮನೆಗಳು ಕುಸಿಯುವ ಭೀತಿಯಿದೆ. ಶೀಘ್ರವೇ ಸಂಸ್ಥೆ ಅಧಿಕೃತರು ಪರಿಹಾರ ಕ್ರಮಕೈಗೊಳ್ಳಬೇಕಿದೆ".ಐ.ಬಿ.ಹುಸೈನ್ ತೋಟದ ಮಾಲೀಕರು
"ಹುಸೈನ್ ಅವರು ಪಾವೂರು ಗ್ರಾಮ ಪಂಚಾಯಿತಿನ ಮಾಜಿ ಸದಸ್ಯರಾಗಿದ್ದವರು. ಅವರ ಒಂದು ಎಕರೆ ಜಾಗದಲ್ಲಿ ಶ್ರಮವಹಿಸಿ, ಕಷ್ಟಪಟ್ಟು ತೋಟವನ್ನು ಬೆಳೆಸಿದವರು. ಐದು ವರ್ಷಗಳ ಹಿಂದೆ ಗೇಯ್ಲ್ ಸಂಸ್ಥೆ ಕೈಗೊಂಡ ಕಾಮಗಾರಿ ಅವರ ತೋಟವನ್ನೇ ನಾಶಮಾಡಿದೆ. ಜೊತೆಗೆ ಸ್ಥಳೀಯ ಖಾಸಗಿಯವರ ಜಾಗಗಳು, ಮನೆಗಳು ಭೂಕುಸಿತದಿಂದ ಅಪಾಯದಂಚಿಗೆ ತಲುಪಿದೆ. ಸಾರ್ವಜನಿಕ ತೋಡನ್ನು ಮುಚ್ಚಿ ಅವೈಜ್ಞಾನಿಕವಾಗಿ ನಡೆಸಿದ ಕಾಮಗಾರಿಯಿಂದ ಇಡೀ ಊರಿಗೆ ತೊಂದರೆಯಾಗಿದೆ. ಸಂಸ್ಥೆ ತುರ್ತು ಪರಿಹಾರ ಕ್ರಮಕೈಗೊಳ್ಳದೇ ಇದ್ದಲ್ಲಿ ಕಾನೂನು ರೀತ್ಯ ಹೋರಾಟ ಮುಂದುವರಿಸಬೇಕಾಗುತ್ತದೆ". ವಿವೇಕ್ ಶೆಟ್ಟಿ ಮಾಜಿ ಸದಸ್ಯರು ಪಾವೂರು ಗ್ರಾ.ಪಂ