ಕುಂದಾಪುರ, ಜೂ 28 (DaijiworldNews/SM): ಮರವಂತೆಯಲ್ಲಿ ಕಡಲು ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಭೀಕರ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಭಯ ಹುಟ್ಟಿಸುವಂತಹ ದೈತ್ಯ ಅಲೆಗಳನ್ನು ಕಂಡಾಗಲೇ ಭಯವಾಗುತ್ತದೆ. ಆದರೆ ಪ್ರವಾಸಿಗರು ಮಾತ್ರ ಹುಚ್ಚು ದೈರ್ಯದಿಂದ ಸಮುದ್ರದಲ್ಲಿ ಹುಚ್ಚಾಟ ಮೆರೆಯುತ್ತಿರುವ ಇಲ್ಲಿ ನಿತ್ಯವೂ ಕಾಣ ಬಹುದಾಗಿದೆ.
ಚಂಡಮಾರುತದ ಪ್ರಭಾವಕ್ಕೆ ಸಮುದ್ರ ಮತ್ತಷ್ಟು ಕ್ರುದ್ಧಗೊಂಡಿತು. ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದವು. ಈ ನಡುವೆಯೇ ಪ್ರವಾಸಿಗರು ಅಲೆಗಳ ಎದುರು ಸ್ಲೆಫ್ಪಿ ತಗೆದುಕೊಳ್ಳಲು ಮುನ್ನುಗ್ಗುತ್ತಿದ್ದರು. ಚತುಷ್ಟಥದ ಉದ್ದಕ್ಕೂ ಮರವಂತೆಯಲ್ಲಿ ಕೈಬೀಸಿ ಕರೆಯುವ ಕಡಲ ಸೌಂದರ್ಯಕ್ಕೆ ಮನಸೋಲುವ ಪ್ರವಾಸಿಗರು ಅಪಾಯದ ಅರಿವಿಲ್ಲದೆ ಸಮುದ್ರಕ್ಕೆ ಇಳಿಯುವುದು, ಮೈಮರೆಯುವುದು ಕಾಣಬಹುದಾಗಿದೆ.
ಸಮುದ್ರಕ್ಕೆ ಇಳಿಯದಂತೆ ಅಲ್ಲಲ್ಲಿ ಫಲಕಗಳನ್ನು ಅಳವಡಿಸಲಾಗಿದೆ. ಆಪಾಯದ ಮುನ್ಸೂಚನೆಯಾಗಿ ಅಪಾಯದ ಟೇಪ್ಗಳನ್ನು ಕಟ್ಟಲಾಗಿದೆ. ರಕ್ಷಣ ಸಿಬ್ಬಂದಿಗಳು ಆಗಾಗ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ಆದರೂ ಕೂಡಾ ಪ್ರವಾಸಿಗರು ಮಕ್ಕಳು, ಹಿರಿಯರು ಎನ್ನದೇ ಸಮುದ್ರದ ಜೊತೆ ಹುಚ್ಚಾಟ ಆಡುವುದು ಮಾತ್ರ ನಿಂತಿಲ್ಲ.
ಮರವಂತೆಯ ಕಡಲಕಿನಾರೆ ಸಾಕಷ್ಟು ವಿಸ್ತಾರವಾಗಿರುದರಿಂದ ಬೆರಳೆಣಿಕೆಯ ಸಿಬ್ಬಂದಿಗಳಿಂದ ಪ್ರವಾಸಿಗರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಮೈಲುಗಟ್ಟಲೆ ದೂರವಿರುವ ಕಿನಾರೆ ಒಬ್ಬರೋ ಇಬ್ಬರೋ ಸಿಬ್ಬಂದಿಗಳಿರುತ್ತಾರೆ. ಅವರು ಆಚೆ ಕಡೆಗೆ ಹೋಗುವುದರೊಳಗೆ ಈ ಭಾಗದಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯುತ್ತಾರೆ.
ಈಗಂತೂ ಸಮುದ್ರ ಅಲೆಗಳು ರುದ್ರಭಯಂಕರವಾಗಿದ್ದು ಸೆಲ್ಫಿ ಪ್ರಿಯರು ಅಪಾಯವನ್ನು ಲೆಕ್ಕಿಸಿದೇ ಬಂಡಗಲ್ಲುಗಳ ಮೇಲೆ ಟೆಟ್ರಾಪೊಡ್ಗಳ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಜಾರುವ ಬಂಡೆಗಳು, ಸರಿಯಾಗಿ ನಿಂತುಕೊಳ್ಳಲಾಗದ, ತುಸು ಆಯಾತಪ್ಪಿದರೂ ಕಡಲ ಅಲೆಗಳೊಳಗೆ ಬಲಿಯಾಗಬೇಕಾದ ಸ್ಥಿತಿ ಇದೆ. ಆದರೆ ಬೇರೆ ಬೇರೆ ಭಾಗದಿಂದ ಬರುವ ಪ್ರವಾಸಿಗರು ಇಲ್ಲಿನ ಸಮುದ್ರದ ಅರಿವಿಲ್ಲ. ನೀರಿನ ಆಕರ್ಷಣೆ ಅವರನ್ನು ಸೆಳೆಯುತ್ತದೆ. ತುಸು ಎಚ್ಚರ ತಪ್ಪಿದರೂ ಕೂಡಾ ಪ್ರಾಣಹಾನಿ ಸಂಭವಿಸುತ್ತದೆ.
ಎಚ್ಚರಿಕೆಯನ್ನು ನಿರ್ಲಕ್ಷಿಸಿ ಸಮುದ್ರದ ಜೊತೆ ಹುಚ್ಚು ಸಾಹಸಕ್ಕೆ ಮುಂದಾದ ಹಲವರು ಈ ಹಿಂದೆ ಸಮುದ್ರ ಪಾಲಾಗಿರುವುದನ್ನು ಯಾರೂ ಮರೆಯಲಾರರು. ಆದರೂ ಕೂಡಾ ಭಂಡ ಧೈರ್ಯ, ಸಮುದ್ರದ ಆಲೆಗಳ ಜೊತೆ ಸರಸ ಮಾತ್ರ ಮುಂದುವರಿಯುತ್ತಲೇ ಇದೆ. ಪ್ರವಾಸಿಗರ ಹುಚ್ಚಾಟವನ್ನು ನಿಯಂತ್ರಿಸಲು ಕರಾವಳಿ ಕಾವಲು ಪಡೆ ಇನ್ನಷ್ಟು ಹೆಚ್ಚುವರಿ ಸಿಬ್ಬಂದಿಗಳ ನೇಮಕ ಮಾಡಿಕೊಂಡು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಸಮುದ್ರದ ಅಪಾಯವನ್ನು ಎಚ್ಚರಿಸುವ ಸಣ್ಣ ಸಣ್ಣ ಕರಪತ್ರದ ಮಾದರಿಗಳನ್ನು ಅಂಟಿಸುವ ಬದಲು ದೊಡ್ಡ ಫಲಕಗಳ ಅಳವಡಿಸಿ ಜಾಗೃತಿ ಮೂಡಿಸಬೇಕು. ಬೇರೆ ಬೇರೆ ಜಿಲ್ಲೆ, ರಾಜ್ಯದಿಂದ ಬರುವ ಪ್ರವಾಸಿಗರಲ್ಲಿ ಮಾಹಿತಿ ಕೊರತೆ ಇರುತ್ತದೆ. ಅವರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಪ್ರವಾಸೋಧ್ಯಮ ಇಲಾಖೆ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕಾಗಿದೆ.