ಮಂಗಳೂರು, ಜೂ 28 (DaijiworldNews/MS): ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣನಾದ ಪತಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷಕಠಿಣ ಸಜೆ ವಿಧಿಸಿ ಆದೇಶ ನೀಡಿದೆ.
ಧರ್ಮಸ್ಥಳ ಸಮೀಪದ ನೆರಿಯ ಗ್ರಾಮದ ನೆರಿಯಕಾಡು ಕೊಟ್ಟಕ್ಕರ ನಿವಾಸಿ ಮ್ಯಾಥ್ಯು ಅವರ ಪುತ್ರ ಜಾನ್ಸನ್ ಕೆ.ಎಂ.(41) ಪತ್ನಿಯ ಹತ್ಯೆ ನಡೆಸಿದ್ದ ಅಪರಾಧಿ.ಐಪಿಸಿ ಸೆಕ್ಷನ್ 498 ಎ ಅನ್ವಯ 3 ವರ್ಷ ಕಠಿನ ಸಜೆ, 10 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಸಜೆ, 304 ಪಾರ್ಟ್-2ರನ್ವಯ 7 ವರ್ಷ ಕಠಿನ ಸಜೆ, 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ 1 ವರ್ಷ ಹೆಚ್ಚುವರಿ ಸಾದಾ ಸಜೆ ವಿಧಿಸಿ ತೀರ್ಪು ನೀಡಲಾಗಿದೆ.
ಘಟನೆ ವಿವರ: ಜಾನ್ಸನ್ ತನ್ನ ಪತ್ನಿ ಸೌಮ್ಯಾ ಫ್ರಾನ್ಸಿಸ್ (36) ಅವರೊಂದಿಗೆ 2021ರ ಜ.7ರಂದು ರಾತ್ರಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ, ಆಕೆಯ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದ. ಗಾಯಗೊಂಡು ಅಸ್ವಸ್ಥಳಾದ ಪತ್ನಿಯನ್ನು ಕಕ್ಕಿಂಜೆಯ ಆಸ್ಪತ್ರೆಗೆ ಕೊಂಡೊಯ್ದಿದ್ದ. ಗಾಯ ಗಂಭೀರವಿದ್ದ ಹಿನ್ನೆಲೆಯಲ್ಲಿ ಅಲ್ಲಿಂದ ಉಜಿರೆಯ ಆಸ್ಪತ್ರೆಗೆ ತರಲಾಗಿದ್ದು ಅಲ್ಲಿ ಆಕೆ ಮೃತರಾಗಿದ್ದರು.
ಈ ಕುರಿತು ಸೌಮ್ಯ ಅವರ ಸೋದರ ಸನೋಜ್ ಫ್ರಾನ್ಸಿಸ್ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದರು. ತನ್ನ ಸೋದರಿಗೆ ಮಾನಸಿಕ-ದೈಹಿಕ ಹಿಂಸೆ ನೀಡಲಾಗುತ್ತಿತ್ತು, ಅಲ್ಲದೆ ಒಮ್ಮೆ ಚರ್ಚ್ನಲ್ಲೂ ಮಾತುಕತೆ ನಡೆಸಿದ್ದು, ಅದರ ಬಳಿಕವೂ ಹಿಂಸೆ ಮುಂದುವರಿದಿದ್ದ ಬಗ್ಗೆ ದೂರಿನಲ್ಲಿ ತಿಳಿಸಲಾಗಿತ್ತು. ಪ್ರಕರಣದ ಕುರಿತು ತನಿಖೆ ಕೈಗೆತ್ತಿಕೊಂಡ ಬೆಳ್ತಂಗಡಿ ವೃತ್ತದ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆ ಕೈಗೆತ್ತಿಕೊಳ್ಳಲಾಗಿದ್ದು, 23 ಸಾಕ್ಷಿದಾರರು ಸಾಕ್ಷಿ ನುಡಿದಿದ್ದರು, 40 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಮರಣೋತ್ತರ ವರದಿಯ ಪ್ರಕಾರ ಹಳೆಯ ಗಾಯಗಳೂ ಇದ್ದ ಕಾರಣ ಮಹಿಳೆಯ ಮೇಲೆ ಹಿಂದೆಯೂ ಹಿಂಸಾತ್ಮಕ ಹಲ್ಲೆ ನಡೆದಿದೆ ಎಂದು ವರದಿ ಕೊಡಲಾಗಿತ್ತು. ಹಲ್ಲೆ ವೇಳೆ ನಾಲ್ಕೈದು ಗಾಯಗಳಿದ್ದ ಕಾರಣ ಇದು ಕೊಲೆಯಲ್ಲ, ಆದರೆ ಐಪಿಸಿ 304 ಪಾರ್ಟ್-2 ಅನ್ವಯ ನರಹತ್ಯೆ ಎಂದು ನ್ಯಾಯಾಲಯವು ತೀರ್ಮಾನಿಸಿದೆ. ಹಲವು ಗಾಯಗಳಿದ್ದು, ಕೆಎಂಸಿಯ ಡಾ| ಸೂರಜ್ ಶೆಟ್ಟಿ ಅವರು ನೀಡಿದ್ದ ವಿಸ್ತೃತ ಮರಣೋತ್ತರ ವರದಿಯೂ ಈ ತೀರ್ಪಿನಲ್ಲಿ ಮಹತ್ವದ ಪಾತ್ರ ವಹಿಸಿದೆ.
ನ್ಯಾಯಾಧೀಶ ಎಚ್.ಎಸ್.ಮಲ್ಲಿಕಾರ್ಜುನ ಸ್ವಾಮಿ ಅವರು ವಿಚಾರಣೆ ಕೈಗೊಂಡು ತೀರ್ಪು ನೀಡಿದ್ದಾರೆ. ಸರಕಾರ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ.ಕ್ರಾಸ್ತಾ ಅವರು ವಾದ ಮಂಡಿಸಿ ದ್ದರು.