ಬಂಟ್ವಾಳ , ಜೂ. 27 (DaijiworldNews/SM): ತಾಲೂಕಿನ ಕೊಳ್ನಾಡು ಗ್ರಾಮದ ಸದಾಶಿವ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಆಟೋದಲ್ಲಿ ಸಂಚರಿಸುತ್ತಿದ್ದ ದಂಪತಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪಾತೂರು ಗ್ರಾಮದ ತಲೆಕ್ಕಿ ಒಳಕ್ಕುಡ್ಡೆ ನಿವಾಸಿ ವಿಶ್ವನಾಥ ಶೆಟ್ಟಿ ರವರ ಪುತ್ರ ಸುದರ್ಶನ್ ಯಾನೇ ಮುನ್ನ ಹಾಗೂ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಮೆದು ಕಟ್ಟತ್ತಿಲ ಅಂಗನವಾಡಿ ಬಳಿಯ ಪೂವಣಿರವರ ಪುತ್ರ ಧನ್ ರಾಜ್ ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ
ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಪಾಲ್ತಾಜೆ ನಿವಾಸಿ ಸೀತಾರಾಮ ಪೂಜಾರಿರವರ ಪುತ್ರ ಜಯಂತರವರು ನೀಡಿದ ದೂರಿನಂತೆ ಮುನ್ನ ಅಲಿಯಾಸ್ ಸುದರ್ಶನ, ಶರತ್, ಧನು, ಉದಯರವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಜಯಂತರವರು ನೀಡಿದ ದೂರಿನಲ್ಲೇನಿದೆ:
ಜೂ.೨೫ರಂದು ರಾತ್ರಿ ನಾನು ನನ್ನ ಮಗುವನ್ನು ಪತ್ನಿಯೊಂದಿಗೆ ಸೇರಿಕೊಂಡು ಸ್ನೇಹಿತನ ಜೊತೆಗೆ ಆಟೋ ರಿಕ್ಷಾದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸದಾಶಿವ ದೇವಸ್ಥಾನಕ್ಕೆ ಹೋಗುವ ದಾರಿಗೆ ತಲುಪುತಿದ್ದಂತೆ ಸಾಲೆತ್ತೂರಿನ ವೈನ್ ಶಾಪ್ ಕಡೆಯಿಂದ ಎರಡು ಮೋಟಾರ್ ಸೈಕಲ್ ಗಳಲ್ಲಿ ಮುನ್ನ ಯಾನೆ ಸುದರ್ಶನ್,ಶರತ್,ಧನು ಮತ್ತು ಉದಯ ರವರು ಬಂದು ನಮ್ಮ ಆಟೋ ರಿಕ್ಷಾವನ್ಮುತಡೆದು ನಿಲ್ಲಿಸಿ ನನ್ನ ಪತ್ನಿಯ ಮೈ ಮೇಲೆ ಕೈ ಹಾಕಿ ದೂಡಿದಾಗ ನಾನು ಅದನ್ನು ತಡೆಯಲು ಹೋದಾಗ ನನ್ನ ಮೇಲೆ ತಂಡ ಹಲ್ಲೆ ನಡೆಸಿದೆ. ನನ್ನ ಪತ್ನಿ ಹಾಗೂ ಸ್ನೇಹಿತ ಹಲ್ಲೆನಡೆಸುವುದನ್ನು ತಡೆದಾಗ ತಂಡ ನನಗೆ ಜೀವ ಬೆದರಿಕೆ ಒಡ್ಡಿ ತೆರಳಿದೆ ಎಂದು ಜಯಂತರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.