ಮಂಗಳೂರು, ಜೂ 27 (DaijiworldNews/HR): ಸಚಿವ ಪ್ರಿಯಾಂಕ ಖರ್ಗೆ ಅವರು ಎಚ್ಚರಿಕೆಯಿಂದ ಮಾತನಾಡಬೇಕು. ಜನರ ಆಶಯಗಳಿಗೆ ಸರ್ಕಾರ ಗೌರವ ನೀಡಬೇಕು. ಪೊಲೀಸರೂ ಗೋ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಭಾವನೆಗಳಿಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಹೀಗೆ ಆದಲ್ಲಿ ಜಿಲ್ಲೆಯಲ್ಲಿ ಅಶಾಂತಿ ನಿರ್ಮಾಣವಾಗಬಹುದು ಎಂದರು.
ಇನ್ನು ದೇಶದಲ್ಲಿ ಗೋ ಸಂಸ್ಕೃತಿ ಇದೆ. ಕೃಷಿ, ಜೀವನ, ಆರಾಧನೆ ಎಲ್ಲದಕ್ಕೂ ಗೋವು ಮುಖ್ಯವಾಗಿದೆ. ಗೋ ರಕ್ಷಣೆಯ ಉದ್ದೇಶಕ್ಕೆ ಬಿಜೆಪಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿತ್ತು. ಮಹಾತ್ಮ ಗಾಂಧಿಯೂ ಗೋಸಂರಕ್ಷಣೆ ಆಗಬೇಕು ಎಂದಿದ್ದಾರೆ.
ಕೆಲವು ಆಚರಣೆಯ ವೇಳೆ ಗೋ ಹತ್ಯೆ ಆಗುತ್ತದೆ. ಗೋವುಗಳ ರಕ್ಷಣೆಗಾಗಿ ನಾವು ಕಾನೂನು ತಂದಿದ್ದು, ಕಾನೂನು ಜಾರಿಯಲ್ಲಿರುವಾಗ ಗೋ ಕಳ್ಳತನ, ಗೋ ಹತ್ಯೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.