ಮಂಗಳೂರು, ಜೂ 26 (DaijiworldNews/SM): ಡ್ರಗ್ಸ್ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳು ಭಾಗಿಗಳಾಗಿದ್ದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ನಗರದಲ್ಲಿ ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇತ್ತೀಚಿಗೆ ಸಚಿವ ದಿನೇಶ್ ಗುಂಡೂರಾವ್ ನೀಡಿದ ಹೇಳಿಕೆಯ ಆಧಾರದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಯಾವುದೇ ಸಿಬ್ಬಂದಿಗಳು ಇಂತಹ ಪ್ರಕರಣಗಳಲ್ಲಿ ಭಾಗಿಗಳಾಗಿಲ್ಲ ಎಂಬ ವಿಶ್ವಾಸವಿದೆ. ನಾನು ಇಲ್ಲಿ ಸೇವೆ ಆರಂಭಿಸಿ ನಾಲ್ಕು ತಿಂಗಳಾಗಿದ್ದು, ಇಲ್ಲಿಯ ತನಕ ಅಂತಹ ಯಾವುದೇ ವಿಚಾರಗಳು ನನ್ನ ಗಮನಕ್ಕೆ ಬಂದಿಲ್ಲ. ಈಗಾಗಲೇ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಎಚ್ಚರಿಕೆ ರವಾನಿಸಲಾಗಿದೆ. ಸಿಬ್ಬಂದಿಗಳು ಇಂತಹ ಪ್ರಕರಣಗಳಲ್ಲಿ ಭಾಗವಹಿಸಿದ್ದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ. ಡ್ರಗ್ಸ್ ವಿಚಾರದಲ್ಲಿ ಸಿಬ್ಬಂದಿ ಅಥವಾ ಅಧಿಕಾರಿಗಳು ಭಾಗಿಯಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದರು.
ಡ್ರಗ್ಸ್ ಮುಕ್ತ ಮಂಗಳೂರು ಪ್ರಯುಕ್ತ ಎರಡು ಹಂತದಲ್ಲಿ ಕಾರ್ಯಾಚರಣೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ. ಮೊದಲನೆಯದಾಗಿ ಡ್ರಗ್ಸ್ ಪೂರೈಕೆ-ಸಾಗಾಟದಾರರ ಮೇಲೆ ಇಲಾಖೆ ತೀಕ್ಷ್ಣ ಹಾಗೂ ಆಳವಾಗಿ ನಿಗಾ ಇರಿಸಿದೆ. ಮತ್ತೊಂದೆಡೆ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.