ಉಳ್ಳಾಲ, ಜೂ 26 (DaijiworldNews/MS): ದೃಶ್ಯದಲ್ಲಿ ಮಳೆಗೆ ಜಾರಿಬಿದ್ದ ರೀತಿಯಲ್ಲಿ ವಿದಾರ್ಥಿನಿ ಕಂಡರೂ, ವಾಸ್ತವವಾಗಿ ಒಂದನೇ ತರಗತಿಯ ಆರು ವರ್ಷದ ವಿದ್ಯಾರ್ಥಿನಿ ಬಿದ್ದಿರುವುದು ಬೆನ್ನಿನಲ್ಲಿದ್ದ ಅತಿಭಾರದ ಶಾಲಾ ಬ್ಯಾಗ್ ಬ್ಯಾಲೆನ್ಸ್ ಮಾಡಲಾಗದೇ.!
ಆ ಪುಟ್ಟ ಬಾಲೆಯ ಬ್ಯಾಗಿನಲ್ಲಿದ್ದುದು ಬರೋಬ್ಬರಿ 19ನೋಟ್ ಪುಸ್ತಕಗಳು 12 ಕೆ.ಜಿ ಭಾರವನ್ನು ಹೊರಲು ಸಾಧ್ಯವಾಗದ ಮಗು ಓಡುವ ರಭಸದಲ್ಲಿ ಕೆಳಗೆಬಿದ್ದು ಗಾಯಗೊಂಡಿರುವ ಘಟನೆ ಮುಡಿಪು ಸಮೀಪ ನಡೆದಿದೆ. ಈ ಕುರಿತು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಖಾಸಗಿ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಇಂಟರ್ ಲಾಕ್ ರಸ್ತೆಗೆ ಬಿದ್ದು ಮೂಗಿಗೆ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ನೋಡಲು ಮಳೆಗೆ ಜಾರಿಬಿದ್ದಿರುವುದಾಗಿ ಕಂಡುಬಂದರೂ, ಮಗುವಿನ ಬೆನ್ನಲ್ಲಿ ೧೯ ಕೆ.ಜಿಯ ಪುಸ್ತಕಗಳಿತ್ತು. ಶಿಕ್ಷಣ ಇಲಾಖೆಯ ಆದೇಶವಿದ್ದರೂ, ಶಿಕ್ಷಣ ಸಂಸ್ಥೆಗಳು ಅದನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿವೆ ಅನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಹಿಂದಿನ ಮಕ್ಕಳ ಜೀವವೇ ಬೇರೆಯಾಗಿತ್ತು, ಈಗಿನ ಮಕ್ಕಳು ಬಹಳಷ್ಟು ಸೂಕ್ಷ್ಮರೀತಿಯಲ್ಲಿ ಇರುತ್ತಾರೆ. ದೇಹಕಾಯವೂ ಕಿರಿದಾಗಿರುತ್ತದೆ. ಇಂತಹ ಮಕ್ಕಳಲ್ಲಿ ಶಿಕ್ಷಕರು ಭಾರದ ಪುಸ್ತಗಳನ್ನು ಹೊರಿಸಿದರೆ ಬಹುಬೇಗನೇ ಅವರ ಬೆನ್ನಲ್ಲಿ ನೋವುಗಳು ಕಾಣುವುದರಲ್ಲಿ ಸಂಶಯವಿಲ್ಲ. ಅಲ್ಲದೆ ಶಾಲೆಯಲ್ಲಿ ದೈಹಿಕ ಆರೋಗ್ಯಕ್ಕೆಂದೇ ಹೆಚ್ಚುವರಿ ರೂ.೬,೦೦೦ ಶುಲ್ಕವನ್ನು ಪಾವತಿಸಲಾಗುತ್ತಿದೆ. ಇವೆಲ್ಲದರ ನಡುವೆ ಮತ್ತೆ ಮಕ್ಕಳ ಆರೋಗ್ಯ, ಮನಸ್ಸಿನಲ್ಲಿ ಚೆಲ್ಲಾಟವಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಅನ್ನುವ ಆಗ್ರಹ ವ್ಯಕ್ತವಾಗಿದೆ.