ಉಡುಪಿ, ಎ02(SS): ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಚುನಾವಣಾ ಪ್ರಚಾರದ ಅಬ್ಬರ ಗರಿಗೆದರಿದ್ದು, ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಕೇಂದ್ರ, ರಾಜ್ಯದ ಪ್ರಬಲ ನಾಯಕರು ಜಿಲ್ಲೆಯತ್ತ ಮುಖ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಎ. 13ರಂದು ಉಡುಪಿಗೆ ಆಗಮಿಸುವುದು ಖಚಿತವಾಗಿದೆ. ಮಾತ್ರವಲ್ಲ, ಚಿಕ್ಕಮಗಳೂರಿಗೆ ಎ. 15ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಿ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಜಿಲ್ಲೆಯ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸಮಯವಿನ್ನೂ ನಿರ್ಧಾರವಾಗಿಲ್ಲ. ಎರಡು ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೋದಿ ಅವರ ಕಾರ್ಯಕ್ರಮ ನಡೆಯಲಿದ್ದು, ಉಡುಪಿಯ ಕಾರ್ಯಕ್ರಮ ಉಡುಪಿ - ಚಿಕ್ಕಮಗಳೂರು, ದ.ಕ., ಶಿವಮೊಗ್ಗ, ಉ.ಕ. ಜಿಲ್ಲೆಯ ಆಂಶಿಕ ಭಾಗವನ್ನು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿದೆ.