ಮಂಗಳೂರು, ಜೂ 25 (DaijiworldNews/SM): ಬಿರುವೆರ್ ಕುಡ್ಲ ಬಜಪೆ ಘಟಕದ ಮಹಾಸೇವಾ ಯೋಜನೆಯ ಅಡಿಯಲ್ಲಿ ಸುಸಜ್ಜಿತ ಮನೆ ನಿರ್ಮಾಣದ ಉದ್ಘಾಟನೆ ಹಾಗೂ ಹಸ್ತಾಂತರ ಕಾರ್ಯಕ್ರಮ ಜೂನ್ 25ರ ರವಿವಾರ ಬೆಳಿಗ್ಗೆ 10 ಗಂಟೆಗೆ ನೆರವೇರಿತು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್, ಶಾಸಕ ಭರತ್ ಶೆಟ್ಟಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉದ್ಘಾಟನಾ ಕಾರ್ಯದಲ್ಲಿ ಕೈಜೋಡಿಸಿದರು.
ಮನೆಯ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕುದ್ರೋಳಿಯ ಅಧ್ಯಕ್ಷರಾದ ಸಾಯಿ ರಾಮ್ ರವರು ನೆರವೇರಿಸಿದರು. ಗುರುಪುರದ ವಜ್ರದೇಹಿ ಮಠದ ಶ್ರೀ ರಾಜಶೇಖರನಂದ ಸ್ವಾಮೀಜಿ ಬಿರುವೆರ್ ಕುಡ್ಲ ಸಂಘಟನೆಯ ಸಾಧನೆಯನ್ನು ಹಾಗೂ ಶ್ರದ್ಧೆಯನ್ನು ಶ್ಲಾಘಿಸಿದರು. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಬಿರುವೆರ್ ಕುಡ್ಲ ಸಂಘಟನೆಯ ಬಗ್ಗೆ ಸಮಾಜಮುಖಿ ಸೇವೆ ನಾನು ಕಳೆದ ಆರು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ನನ್ನ ಆತ್ಮೀಯ ಮಿತ್ರರಾದ ಉದಯ ಪೂಜಾರಿರವರ ನೇತೃತ್ವದಲ್ಲಿ ಯಶಸ್ವಿಯಾಗಿ ಸಂಘಟನೆ ಸಮಾಜದ ಕಾಳಜಿ, ಅಶಕ್ತರ ಪಾಲಿಗೆ ದಾರಿದೀಪವಾಗಿ ಸಮಾಜದ ಜೊತೆ ಸಾಗುತ್ತಿದೆ ಎಂದರು.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ವೈ ಭರತ್ ಶೆಟ್ಟಿಯವರು ಬಿರುವೆರ್ ಕುಡ್ಲ ಸಂಘಟನೆ ಮತ್ತು ತಮ್ಮ ಆತ್ಮೀಯತೆಯನ್ನು ಬಣ್ಣಿಸಿದರು. ಹಾಗೂ ಸಂಘಟನೆಯ ಕಾರ್ಯವೈಕರಿಗೆ ಶುಭ ಹಾರೈಸಿದರು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಬಿರುವೆರ್ ಕುಡ್ಲ ಬಜಪೆ ಘಟಕವು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆಧಾರಿತವಾಗಿ ಸಮಾಜದ ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ಸೇರಿಸಿಕೊಂಡು ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಸಮಾಜದ ದಾರಿದೀಪವಾಗಿದೆ ಎಂದರು.
ಬಡ ಕುಟುಂಬಕ್ಕೆ ಮನೆ ನಿರ್ಮಾಣ, ಹಸ್ತಾಂತರ:
ಬಜಪೆ ಸಮೀಪದ ಮುಂಡಬೆಟ್ಟು, ಮೂಡುಪೆರಾರ ನಿವಾಸಿ ದಯಾನಂದ ಬಂಗೇರ ಮತ್ತು ಅವರ ಮೂರು ಮಕ್ಕಳು, ಒಂದು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಇವರ ಕುಟುಂಬವು ಕಡು ಬಡತನದಲ್ಲಿ ಜೀವನ ಸಾಗುತ್ತಿದ್ದರು. ಇವರಿಗೆ ವಾಸಿಸಲು ಯೋಗ್ಯವಾದ ಮನೆ ಇರಲಿಲ್ಲ. ಒಂದು ಗುಡಿಸಿಲಿನಲ್ಲಿ ವಾಸಿಸುತ್ತಿದ್ದು, ತನ್ನ ಕಷ್ಟವನ್ನು ತಾಳಲಾರದೆ ಇವರು ಬಿರುವೆರ್ ಕುಡ್ಲ ಬಜಪೆ ಘಟಕಕ್ಕೆ ಮನವಿಯನ್ನು ನೀಡಿದ್ದರು. ಇದನ್ನು ಗಮನಿಸಿದ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇವರಿಗೆ ಮನೆ ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿ ತಕ್ಷಣವೇ ಮನೆ ನಿರ್ಮಾಣದ ಕೆಲಸವನ್ನು ಆರಂಭಿಸಿ ಕೆಲವೇ ದಿನಗಳಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಮಹಾ ಸೇವಾ ಯೋಜನೆಯ ಅಡಿಯಲ್ಲಿ ಸುಸಜ್ಜಿತವಾದ ಸುಮಾರು 12 ಲಕ್ಷ ವೆಚ್ಚದ ಮನೆಯನ್ನು ನಿರ್ಮಿಸಿ ಕೊಟ್ಟಿದೆ. ಇದು ಅನೇಕ ದಾನಿಗಳ ಸಹಕಾರದಿಂದ ಮನೆ ನಿರ್ಮಾಣದ ಮಹಾ ಸೇವಾ ಯೋಜನೆ ಅತಿ ಯಶಸ್ವಿಯಾಗಿ ನೆರವೇರಿದೆ ಎಂದು ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷ ಪ್ರಶಾಂತ್ ಕುಮಾರ್ ಕೆಂಜಾರು ಕಾನ ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಮನೆ ನಿರ್ಮಾಣದ ಕಾರ್ಯಕ್ಕೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮನಾಥ ಕೋಟ್ಯಾನ್, ಶ್ರೀ ಕ್ಷೇತ್ರ ಕುದ್ರೋಳಿ ಇದರ ಉಪಾಧ್ಯಕ್ಷ ಊರ್ಮಿಳ ರಮೇಶ್ ಕುಮಾರ್, ಶ್ರೀ ಕಟೀಲ್ ಕನ್ಸ್ಟ್ರಕ್ಷನ್ ಶಿವರಾಮ ಕೋಟ್ಯಾನ್, ಸಂಘಟನೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್, ಉದ್ಯಮಿ ವಿವೇಕ್ ರಾಜ್ ಪೂಜಾರಿ, ಚಂದ್ರಶೇಖರ್ ಎಂ ಅಮಿನ್ ವಕೀಲರು, ಘಟಕದ ಅಧ್ಯಕ್ಷ ಪ್ರಶಾಂತ್ ಕುಮಾರ್ ಕೆಂಜಾರು ಕಾನ, ಪಡುಪೆರಾರ ಪಂಚಾಯತ್ ಅಧ್ಯಕ್ಷೆ ಅಮಿತಾ ಶೆಟ್ಟಿ ಹಾಗೂ ಗಣ್ಯರು ಉಪಸ್ಥಿತರಿದ್ದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.