ಕಾರ್ಕಳ, ಜೂ 25 (DaijiworldNews/HR) : ನಲ್ಲೂರು ಹುರ್ಲಾಡಿ ಎಂಬಲ್ಲಿ ಮುಂಬಯಿ ಹೊಟೇಲ್ ಮಾಲಕರೊಬ್ಬರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ದಂಪತಿಗಳ ನಡುವೆ ರವಿವಾರ ಬೆಳಿಗ್ಗೆ ಟಿವಿ ಮಾರಾಟದ ವಿಚಾರದಲ್ಲಿ ಜಗಳ ಉಂಟಾಗಿದ್ದು ಇದರಿಂದ ನೊಂದ ಪತ್ನಿ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಗೈದಿರುವ ಬೆನ್ನಲ್ಲೇ ಆಕೆಯ ರಕ್ಷಣೆಗೆ ಮುಂದಾದ ಆಕೆಯ ಪತಿಯೂ ಕೂಡಾ ಅದೇ ಕೆರೆಯಲ್ಲಿ ಸಾವುಕಂಡ ಘಟನೆ ನಡೆದಿದೆ.
ಯಲ್ಲಾಪುರ ಮೂಲದ ಇಮ್ಯಾನುಲ್ ಸಿದ್ಧಿ (40) ಹಾಗೂ ಯಶೋಧಾ (32) ಎಂಬವರು ಆತ್ಮಹತ್ಯೆಗೈದ ದಂಪತಿ.
ಸಿದ್ದಿ ಜನಾಂಗದವರಾಗಿದ್ದ ಇವರು ಕಳೆದ ಎರಡು ವರ್ಷಗಳ ಹಿಂದೆ ಮುಂಬಯಿ ಹೋಟೆಲ್ ಉದ್ಯಮಿ ನಲ್ಲೂರು ಹುರ್ಲಾಡಿ ರಘುವೀರ್ ಶೆಟ್ಟಿ ಅವರ ತೋಟದ ಕೆಲಸಕ್ಕೆ ಬಂದಿದ್ದರು.
ಉತ್ತಮ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ದಂಪತಿಗಳ ನಡುವೆ ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಂದಾಗಿ ಅಗ್ಗಿಂದಾಗೆ ಜಗಳ ತಾರಕಕ್ಕೇರುತ್ತಿತ್ತೆಂದು ತಿಳಿದುಬಂದಿದೆ.
ಇಮ್ಯಾನುಲ್ ಸಿದ್ಧಿ (40) ಕುಡಿತದ ಚಟವೊಂದ್ದ ಎನ್ನಲಾಗಿದ್ದು, ದಂಪತಿಗಳ ಇಬ್ಬರು ಮಕ್ಕಳುಗಳಾದ ಸಾಲೂವ್ (11) ಐರೀನ್(10) ಸ್ಥಳೀಯ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು.
ಮೃತ ಮಕ್ಕಳು ನೀಡಿರುವ ಮಾಹಿತಿಯನ್ವಯ ರವಿವಾರ ಬೆಳಿಗ್ಗೆ ಇಮ್ಯಾನುಲ್ ಸಿದ್ಧಿ ತನ್ನ ಪತ್ನಿಯಲ್ಲಿ ಮಾತು ಆರಂಭಿಸಿ ಮನೆಯಲ್ಲಿರುವ ಟಿ ವಿ ಮಾರಾಟದ ವಿಚಾರವನ್ನು ಮುಂದಿಟ್ಟಿನಂತೆ. ಅದಕ್ಕೆ ಪತ್ನಿ ಯಶೋಧ ಅಕ್ಷೇಪ ವ್ಯಕ್ತ ಪಡಿಸಿದಾಗ ಅವರೊಳಗೆ ಜಗಳ ಏರ್ಪಟ್ಟಿತ್ತಂತೆ. ಮನೆಯಿಂದ ಓಡಿ ಹೋದ ಯಶೋಧ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿದ್ದಳು.
ಪತ್ನಿಯ ಜೀವ ಕಾಪಾಡಲು ಅದೇ ಕೆರೆಗೆ ಹಾರಿ ಇಮ್ಯಾನುಲ್ ಸಿದ್ಧಿ ಎರಡು ಮೂರು ಸಲ ನೀರಿನಿಂದ ಮೇಲೆ ಕೆಳಗೆ ಹೋದರೂ ನಾಲ್ಕನೇ ಬಾರಿ ಆತ ಕೂಡಾ ಅದೇ ಕೆರೆಯಲ್ಲಿ ಲೀನನಾಗಿದ್ದಾನೆ.
ಇಮ್ಯಾನುಲ್ ಸಿದ್ಧಿ ಈಜುಗಾರನಾಗಿದ್ದರೂ ಪತ್ನಿಯನ್ನು ರಕ್ಷಿಸಲು ಅಸಾಧ್ಯವಾಗಿ ಅದೇ ಕೆರೆಯಲ್ಲಿ ಆತ್ಮಹತ್ಯೆ ಗೈದಿರಬೇಕೆಂದು ಶಂಕಿಸಲಾಗಿದೆ. ಈ ಎಲ್ಲಾ ದೃಶ್ಯಾವಳಿಯು ದಂಪತಿಯ ಮಕ್ಕಳು ಕಣ್ಣಾರೆ ಕಂಡಿದ್ದಾರೆ ಎಂಬುವುದೇ ಮನಕಲಕುವಂತೆ ಮಾಡಿದೆ.
"ಹೊಸಬದುಕು" ಕನಸ್ಸಿನೊಂದಿಗೆ ಬಂದಿದ್ದ ದಂಪತಿಗಳ ದುಡುಕು ಸ್ವಭಾವದಿಂದಾಗಿ ಪುಟ್ಟ ಮಕ್ಕಳಿಬ್ಬರನ್ನು ಅನಾಥರನ್ನಾಗಿ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಎಸ್ ಐ ತೇಜಸ್ವಿ ಹಾಗೂ ಪೊಲೀಸ್ ಸಿಬ್ಬಂದಿಗಳು ಅಗಮಿಸಿ ಅಗತ್ಯ ಮಾಹಿತಿಗಳನ್ನು ಕಲೆಹಾಕಿದ್ದಾರೆ.
ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಶವಗಳನ್ನು ಇರಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821